ಮೈಸೂರು: ಕೋವಿಡ್ ಮೂರನೇ ಅಲೆ ದೇವರ ದಯೆಯಿಂದ ಬರಬಾರದು. ಬಂದರೆ ಏನೆಲ್ಲ ಕ್ರಮ ಕೈಗೊಳ್ಳಬೇಕು ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಕೋವಿಡ್ ಕುರಿತ ಅಧಿಕಾರಿಗಳ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲಾ ಸಚಿವರು, ಶಾಸಕರು, ಅಧಿಕಾರಿಗಳ ಸಭೆ ಮಾಡಿದ್ದೇನೆ. ಮೈಸೂರು ಜಿಲ್ಲೆ ಸ್ಥಿತಿಗತಿ, ಮೂರನೇ ಹಂತದ ಮುಂಜಾಗ್ರತೆ ಬಗ್ಗೆ ಪರಿಶೀಲನೆ ಮಾಡಿ ಸಭೆ ಮಾಡಿದ್ದೇನೆ. ಮೈಸೂರಿನ ಪಾಸಿಟಿವಿಟಿ ರೇಟ್ 1.19 ಇದೆ. ಕಳೆದ ಒಂದು ವಾರದಿಂದ 20 ಮಂದಿ ಸಾವನ್ನಪ್ಪಿದ್ದಾರೆ. 1 ಲಕ್ಷ 26 ಸಾವಿರ ವ್ಯಾಕ್ಸಿನೇಷನ್ ಆಗಿದೆ ಎಂದು ಮಾಹಿತಿ ನೀಡಿದರು.
ತಜ್ಞರ ಸಮಿತಿಯ ಸಲಹೆಯಂತೆ ಕೇರಳ, ಮಹಾರಾಷ್ಟ್ರದಲ್ಲಿ ಕೋವಿಡ್ ಹೆಚ್ಚಾದ ಕಾರಣ ಗಡಿಯಲ್ಲಿ ಭದ್ರತೆಯನ್ನು ಹೆಚ್ಚು ಮಾಡಲಾಗಿದೆ. ಅಧಿಕಾರಿಗಳು ಚೆಕ್ ಪೋಸ್ಟ್ ನಲ್ಲಿ ಗಂಭೀರವಾಗಿ ಕೆಲಸ ಮಾಡಬೇಕು. ಚೆಕ್ ಪೋಸ್ಟ್ ನಲ್ಲಿ ಕೆಲಸ ಮಾಡುವ ಎಲ್ಲರಿಗೂ ವ್ಯಾಕ್ಸಿನೇಷನ್ ಆಗಬೇಕು ಎಂದರು.
ಸದ್ಯ ರಾಜ್ಯಕ್ಕೆ 65 ಲಕ್ಷ ಡೋಸ್ ಬರುತ್ತಿದೆ. ಮುಂದಿನ ದಿನಗಳಿಗೆ 1 ಕೋಟಿ ಲಸಿಕೆಗೆ ಮನವಿ ಮಾಡಲಾಗಿದೆ. ಮುಂದಿನ ತಿಂಗಳಿನಿಂದ 1.5 ಕೋಟಿ ಲಸಿಕೆ ಬಂದರೆ ದಿನಕ್ಕೆ 5 ಲಕ್ಷ ವ್ಯಾಕ್ಸಿನೇಷನ್ ನೀಡಲಾಗುತ್ತದೆ ಎಂದು ಸಿಎಂ ಮಾಹಿತಿ ನೀಡಿದರು.
ಸದ್ಯ 9 ಸಾವಿರ ಟೆಸ್ಟ್ ಮಾಡಲಾಗುತ್ತಿದೆ. ಮೈಸೂರು ಜಿಲ್ಲೆಗೆ ಮಂಡ್ಯ, ಚಾ,ನಗರ, ಕೊಡಗು, ಕೇರಳ ದಿಂದ ಹೆಚ್ಚು ಜನ ಬರುತ್ತಾರೆ. ಹೀಗಾಗಿ ಮೈಸೂರಿನಲ್ಲಿ ಹೆಚ್ಚು ಟೆಸ್ಟ್ ಆಗಬೇಕು. ಮೈಸೂರಿನಲ್ಲಿ 14 ಆಕ್ಸಿಜನ್ ಜನರೇಟರ್ ಮುಂಜೂರಾಗಿದೆ ಎಂದು ಸಿಎಂ ಬೊಮ್ಮಾಯೊ ಹೇಳಿದರು.