ಬೆಂಗಳೂರು: ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ಸಚಿವ ಸಂಪುಟದಲ್ಲೀಗ 29 ಸಚಿವರು ಸೇರ್ಪಡೆಯಾಗಿದ್ದಾರೆ. ಆದರೆ ಈ ಬಗ್ಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದಾರೆ. ಬಿಜೆಪಿ ಭಿನ್ನಮತ ನೋಡಿದರೆ ಶೀಘ್ರದಲ್ಲೇ ಮಧ್ಯಂತರ ಚುನಾವಣೆ ನಡೆಯಬಹುದು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದಾರೆ. ಮುಖ್ಯಮಂತ್ರಿಗಳು ಬೆಟ್ಟ ಅಗೆದು ಇಲಿ ಹಿಡಿದಂತಾಗಿದೆ ಎಂದು ಸಿಎಂ ಬೊಮ್ಮಾಯಿ ಸಂಪುಟ ರಚನೆ ಬಗ್ಗೆ ಸಿದ್ದರಾಮಯ್ಯ ವ್ಯಂಗ್ಯ ಪ್ರತಿಕ್ರಿಯೆ ನೀಡಿದ್ದಾರೆ.
ದಲಿತ ಸಮುದಾಯದ ಉದ್ಧಾರಕ್ಕೆ ಅವತಾರ ಎತ್ತಿಬಂದಂತೆ ಇತ್ತೀಚಿನ ದಿನಗಳಲ್ಲಿ ಮಾತನಾಡುತ್ತಿರುವ ಬಿಜೆಪಿ ರಾಜ್ಯ ಸಚಿವ ಸಂಪುಟ ರಚನೆಯಲ್ಲಿ ದಲಿತ ಸಮುದಾಯವನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ರಾಜ್ಯದ ಶೇಕಡಾ 24ರಷ್ಟು ಜನಸಂಖ್ಯೆ ಇರುವ ಪರಿಶಿಷ್ಟ ಜಾತಿ-ಪಂಗಡ ಸಮುದಾಯಕ್ಕೆ ಕೇವಲ ನಾಲ್ಕು ಸಚಿವರನ್ನು ನೀಡಿ ಅನ್ಯಾಯ ಎಸಗಿದೆ.
ನೂತನ ಸಚಿವ ಸಂಪುಟ ರಚನೆಯಲ್ಲಿ ಬಿಜೆಪಿಯೊಳಗಿರುವ ಭಿನ್ನಮತೀಯ ಗುಂಪುಗಳನ್ನು ತೃಪ್ತಿ ಪಡಿಸುವ ಸರ್ಕಸ್ ಕಾಣುತ್ತಿದೆಯೇ ಹೊರತು, ಜನಪರವಾದ ಸಮರ್ಥ ಆಡಳಿತ ನಡೆಸಬೇಕೆಂಬ ಸದುದ್ದೇಶ ಕಾಣುತ್ತಿಲ್ಲ. ಎಲ್ಲರನ್ನೂ ಓಲೈಸಲು ಪ್ರಯತ್ನ ನಡೆಸಿರುವ ಮುಖ್ಯಮಂತ್ರಿಗಳು ಯಾರಿಗೂ ಬೇಡದ ಒಲ್ಲದ ಕೂಸು ಆಗಿರುವಂತೆ ಕಾಣಿಸುತ್ತಿದೆ.
ಸಾಮರ್ಥ್ಯ, ಸಾಮಾಜಿಕ ನ್ಯಾಯ, ಪ್ರಾದೇಶಿಕ ಪ್ರಾತಿನಿಧ್ಯ, ಸ್ವಚ್ಛ ರಾಜಕಾರಣ ಮೊದಲಾದ ಯಾವ ಧನಾತ್ಮಕ ಅಂಶಗಳು ಹೊಸ ಸಚಿವ ಸಂಪುಟದಲ್ಲಿ ಕಾಣಿಸುತ್ತಿಲ್ಲ. ಇತ್ತೀಚೆಗಷ್ಠೇ ಮೊಟ್ಟೆ ಖರೀದಿ ಹಗರಣದಲ್ಲಿ ಆರೋಪಿಯಾಗಿರುವ ಶಶಿಕಲಾ ಜೊಲ್ಲೆ ಅವರಿಗೆ ಸಚಿವಸ್ಥಾನ ನೀಡಿರುವುದು ಪಕ್ಷ ಮತ್ತು ಸಂಘಪರಿವಾರದ ನೈತಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ.
ಮುಖ್ಯಮಂತ್ರಿಗಳು ಬೆಟ್ಟ ಅಗೆದು ಇಲಿ ಹಿಡಿದಂತಾಗಿದೆ
ಇನ್ನು ಟೀಕೆ ಮುಂದುವರೆಸಿರುವ ಸಿದ್ದರಾಮಯ್ಯ ಹೈಕಮಾಂಡ್ ಜೊತೆಗಿನ 3 ದಿನಗಳ ನಿರಂತರ ಚರ್ಚೆ, ಸಮಾಲೋಚನೆಗಳ ನಂತರ ಸಚಿವ ಸಂಪುಟ ರಚನೆ ಮಾಡಲಾಗಿದೆ. ಸಚಿವ ಸಂಪುಟವನ್ನು ನೋಡಿದರೆ ಸಿಎಂ ಬೊಮ್ಮಾಯಿ ಬೆಟ್ಟ ಅಗೆದು ಇಲಿ ಹಿಡಿದಂತಾಗಿದೆ ಎಂದು ಟೀಕಿಸಿದ್ದಾರೆ.
Laxmi News 24×7