ವಿಜಯನಗರ: ಕರ್ನಾಟಕದ 30ನೇ ಸಿಎಂ ಆಗಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರ ಸ್ವೀಕರಿಸಿ ಇನ್ನೂ ಒಂದು ವಾರ ಆಗಿಲ್ಲ. ಇದೀಗ ‘ಕರ್ನಾಟಕ ರಾಜ್ಯದ ಗದ್ದುಗೆ ಏರಲಿದ್ದಾರಂತೆ ಗಡ್ಡಧಾರಿ ವ್ಯಕ್ತಿ’ ಎಂಬ ಮಾತು ಭಾರೀ ಕುತೂಹಲ ಮೂಡಿಸಿದೆ.
ಮೈಲಾರ ವಾಣಿಯ ಭವಿಷ್ಯವಾಣಿಯಂತೆ ಈಗಿರುವ ಸರ್ಕಾರದಲ್ಲಿ ಮೂವರು ಸಿಎಂ ಆಗಿ ಮುಕ್ತಾಯ ಆಗುತ್ತೆ. ಇನ್ನು ಕೆಲವೇ ತಿಂಗಳಲ್ಲಿ ರಾಜ್ಯದ ಮುಖ್ಯಮಂತ್ರಿ ಬದಲಾವಣೆ ಆಗುವುದು ಖಚಿತ. ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಅಧಿಕಾರಾವಧಿ ಪೂರ್ಣಗೊಳಿಸಲ್ಲ ಎಂದು ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಸುಕ್ಷೇತ್ರ ಮೈಲಾರದ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ಭವಿಷ್ಯ ನುಡಿದಿದ್ದಾರೆ.
ಯಡಿಯೂರಪ್ಪ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈಗ ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗಿದ್ದಾರೆ. ಅವರು 6-7 ತಿಂಗಳು ಮಾತ್ರ ರಾಜ್ಯಭಾರ ಮಾಡ್ತಾರೆ. 2022ರ ಮಾರ್ಚ್ನಲ್ಲಿ ಗಡ್ಡಧಾರಿ ವ್ಯಕ್ತಿ ಸಿಎಂ ಆಗ್ತಾರೆ ಎಂದು ವೆಂಕಪ್ಪಯ್ಯ ಒಡೆಯರ್ ಭವಿಷ್ಯ ನುಡಿದಿದ್ದಾರೆ.
ಮೈಲಾರಲಿಂಗೇಶ್ವರನ ಭವಿಷ್ಯವಾಣಿ ಎಂದೂ ಸುಳ್ಳಾಗಿಲ್ಲ ಎಂಬ ಪ್ರತೀತಿ ಇದೆ. ಹಾಗಾಗಿ ಸಿಎಂ ಬದಲಾವಣೆ ಕುರಿತ ಈ ಮಾತು ಭಾರೀ ಸಂಚಲನ ಮೂಡಿಸಿದೆ. ಗಡ್ಡಧಾರಿ ವ್ಯಕ್ತಿ ಯಾರು? ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆ ಶುರುವಾಗಿದೆ.
ಇನ್ನು ಕಲವೇ ದಿನದಲ್ಲಿ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಲಿದೆ. ಪ್ರತಿಯೊಬ್ಬರೂ ಮುನ್ನೆಚ್ಚರಿಕೆ ವಹಿಸಬೇಕು ಎಂದು ಮೈಲಾರ ವಾಣಿ ಎಚ್ಚರಿಕೆ ಕೊಟ್ಟಿದೆ ಎಂದು ಇದೇ ವೇಳೆ ವೆಂಕಪ್ಪಯ್ಯ ಒಡೆಯರ್ ಹೇಳಿದರು.