ಬೆಂಗಳೂರು, ಜು. 31: ಮೀಸಲಾತಿ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರು ತೆಗೆದುಕೊಂಡಿರುವ ನಿರ್ಧಾರವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಾಗತಿಸಿದ್ದಾರೆ. ಜೊತೆಗೆ ಇದೇ ಸಂದರ್ಭದಲ್ಲಿ “ಮೀಸಲಾತಿ ಕುರಿತು ನಮಗೆ ಪಾಠ ಮಾಡುವ ನೈತಿಕತೆ ಬಿಜೆಪಿಗೆ ಇಲ್ಲ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬಿಜೆಪಿ ನಾಯಕರಿಗೆ ತಿರುಗೇಟು ಕೊಟ್ಟಿದ್ದಾರೆ.
“ಈ ಹಿಂದೆ ಹತ್ತು ವರ್ಷಗಳ ಕಾಲ ಯುಪಿಎ ಸರ್ಕಾರವಿದ್ದಾಗ ಹಿಂದುಳಿದ ವರ್ಗಕ್ಕೆ ಮೀಸಲು ಕೊಡುವ ಬಗ್ಗೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಜ್ಞಾನ ಇರಲಿಲ್ಲವೇ?” ಎಂದು ರಾಜ್ಯ ಬಿಜೆಪಿ ಪ್ರಶ್ನೆ ಮಾಡಿತ್ತು. ಜೊತೆಗೆ ಕೇಂದ್ರದ ನರೇಂದ್ರ ಮೋದಿ ಸರ್ಕಾರ ನಿಗದಿ ಮಾಡಿರುವ ಮೀಸಲಾತಿ ಕುರಿತು ದೇಶದಲ್ಲಿ ಮತ್ತೊಮ್ಮೆ ಚರ್ಚೆ ಶುರುವಾಗಿದೆ. ಹೀಗಾಗಿ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ರಾಜ್ಯದಲ್ಲಿಯೂ ಚರ್ಚೆ ಆರಂಭವಾಗಿದೆ.
ಜೊತೆಗೆ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಂತಹ ನಿರ್ಧಾರಗಳನ್ನು ಕೇಂದ್ರ ಬಿಜೆಪಿ ಸರ್ಕಾರ ಪ್ರಕಟಿಸಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಜೊತೆಗೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಪ್ರಯತ್ನದಿಂದಲೇ ಈ ಮೀಸಲಾತಿ ಜಾರಿಗೆ ಬಂದಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬಿಜೆಪಿ ನಾಯಕರಿಗೆ ತಿರುಗೇಟು ಕೊಟ್ಟಿದ್ದಾರೆ. ಅದಕ್ಕೆ ಸಾಕ್ಷಿಗಳನ್ನು ಕೊಟ್ಟಿದ್ದಾರೆ. ಅಷ್ಟಕ್ಕೂ ಕೇಂದ್ರ ಸರ್ಕಾರ ಈಗ ಕೊಡುತ್ತಿರುವ ಮೀಸಲಾತಿ ಏನು? ಆ ಮೀಸಲಾತಿಯಿಂದ ಯಾರಿಗೆ ಸಹಾಯವಾಗಲಿದೆ? ಮುಂದಿದೆ ಸಂಪೂರ್ಣ ಮಾಹಿತಿ!
ಮೋದಿ ಮೀಸಲಾತಿ ನಿರ್ಧಾರಕ್ಕೆ ಸ್ವಾಗತ!
“ರಾಜ್ಯದ ವೈದ್ಯಕೀಯ ಕಾಲೇಜುಗಳಲ್ಲಿ ನೀಟ್ ಮೂಲಕ ಅಖಿಲ ಭಾರತ ಕೋಟಾದಡಿಯಲ್ಲಿ ಸೇರ್ಪಡೆಗೊಳ್ಳುವ ಹಿಂದುಳಿದ ಜಾತಿಯ ವಿದ್ಯಾರ್ಥಿಗಳಿಗೆ ಶೇಕಡಾ 27ರಷ್ಟು ಮೀಸಲಾತಿ ನೀಡುವ ಪ್ರಧಾನಿ ನರೇಂದ್ರ ಮೋದಿ ಘೋಷಣೆಯನ್ನು ನಾನು ಸ್ವಾಗತಿಸುತ್ತೇನೆ” ಎಂದು ರಾಜ್ಯ ವಿಧಾನ ಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
“ಈ ಕುರಿತು ಜುಲೈ 3 ರಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪ್ರಧಾನಮಂತ್ರಿ ಅವರಿಗೆ ಪತ್ರ ಬರೆದು ಹಿಂದುಳಿದ ಜಾತಿಯ ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಗಮನ ಸೆಳೆದಿದ್ದರು. ರಾಜ್ಯದ ವೈದ್ಯಕೀಯ ಕಾಲೇಜುಗಳಿಂದ ಅಖಿಲ ಭಾರತ ಕೋಟಾದಡಿಯಲ್ಲಿ ಪಡೆದಿರುವ ಶೇಕಡಾ 15ರಷ್ಟು ಸೀಟುಗಳಲ್ಲಿಯೂ ಹಿಂದುಳಿದ ಜಾತಿಗಳಿಗೆ ಮೀಸಲಾತಿ ನೀಡಬೇಕೆಂದು” ಒತ್ತಾಯಿಸಿದ್ದರು ಎಂದು ಸಿದ್ದರಾಮಯ್ಯ ಬಿಜೆಪಿ ನಾಯಕರಿಗೆ ನೆನಪು ಮಾಡಿದ್ದಾರೆ.
ಈಗಿನ ಇತಿಹಾಸವನ್ನಾದರೂ ಸರಿಯಾಗಿ ಓದಿ

“ಮೀಸಲಾತಿ ನಿರಾಕರಣೆಯಿಂದಾಗಿ 2017ರಿಂದ ಈ ವರೆಗೆ ಒಟ್ಟು ಸುಮಾರು 11,000ಕ್ಕೂ ವಿದ್ಯಾರ್ಥಿಗಳು ಅವಕಾಶ ವಂಚಿತರಾಗಿರುವುದನ್ನು ಸೋನಿಯಾ ಗಾಂಧಿ ಅವರು ಪತ್ರದಲ್ಲಿ ಉಲ್ಲೇಖಿಸಿದ್ದರು. ಜೊತೆಗೆ ಅಖಿಲ ಭಾರತ ಕೋಟಾದಲ್ಲಿಯೂ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಮೀಸಲಾತಿ ಕೊಡಬೇಕೆಂದು ಆಗ್ರಹ ಮಾಡಿದ್ದರು”ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
“ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಧಾರ ಸ್ವಾಗತಿಸಿದ್ದ ನನ್ನ ಹೇಳಿಕೆಗೆ ರಾಜ್ಯ ಬಿಜೆಪಿ ನಾಯಕರು ಪ್ರತಿಕ್ರಿಯೆ ಕೊಟ್ಟಿದ್ದಾರೆ. ಹತ್ತು ವರ್ಷ ಯುಪಿಎ ಸರ್ಕಾರವಿದ್ದಾಗ ಒಬಿಸಿ ಮೀಸಲು ಬಗ್ಗೆ ಸೋನಿಯಾ ಗಾಂಧಿ ಅವರಿಗೆ ಜ್ಞಾನ ಇರಲಿಲ್ಲವೇ? ಎಂದು ಪ್ರಶ್ನಿಸಿದ್ದಾರೆ. ಬಿಜೆಪಿಯ ಬಡವರ,ರೈತರ, ದಲಿತರ, ಹಿಂದುಳಿದ ಜಾತಿಗಳ ವಿರೋಧಿ ಎಂಬುದೂ ನಂಗೆ ಗೊತ್ತಿದೆ. ಆದರೆ ಆ ಪಕ್ಷ ಇಷ್ಟೊಂದು ಬೌದ್ಧಿಕ ದಿವಾಳಿತನದಿಂದ ಬಳಲುತ್ತಿದೆ ಎಂಬುದು ಗೊತ್ತಿರಲಿಲ್ಲ. ಇತ್ತೀಚಿನ ಇತಿಹಾಸವನ್ನಾದರೂ ಸರಿಯಾಗಿ ಓದಿಕೊಂಡು ಪ್ರತಿಕ್ರಿಯಿಸಿ ಎಂದು ಅವರಿಗೆ ವಿನಯಪೂರ್ವಕವಾಗಿ ಮನವಿ ಮಾಡುತ್ತೇನೆ” ಎಂದು ರಾಜ್ಯ ಬಿಜೆಪಿ ನಾಯಕರನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಚಾಯಿಸಿದ್ದಾರೆ.
ರಾಜ್ಯ ಬಿಜೆಪಿ ನಾಯಕರಿಗೆ ಸಿದ್ದರಾಮಯ್ಯ ಪಾಠ

ಜೊತೆಗೆ ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಹಾಗೂ ಇತರ ಬಿಜೆಯೇತರ ಪಕ್ಷಗಳ ಕೊಡುಗೆಯನ್ನು ಸಿದ್ದರಾಮಯ್ಯ ವಿವರಿಸಿದ್ದಾರೆ. “ಬಿಜೆಪಿ ನಾಯಕರ ಗಮನಕ್ಕಾಗಿ ಕೆಲವು ವಾಸ್ತವಾಂಶಗಳನ್ನು ಮುಂದಿಡುತ್ತೇನೆ. ಮೊದಲನೆಯದಾಗಿ, ದೇಶದಲ್ಲಿಯೇ ಮೊದಲ ಬಾರಿ ಅತ್ಯಂತ ವೈಜ್ಞಾನಿಕವಾದ ಎಲ್.ಜಿ. ಹಾವನೂರು ವರದಿಯ ಅನುಷ್ಠಾನದ ಮೂಲಕ ಹಿಂದುಳಿದ ಜಾತಿಗಳಿಗೆ ಮೀಸಲಾತಿಯನ್ನು ತಂದು ಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ಹಿಂದೆ ರಾಜ್ಯದಲ್ಲಿ ದೇವರಾಜ ಅರಸು ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಇದನ್ನು ಮಾಡಿತ್ತು” ಎಂದು ರಾಜ್ಯ ಬಿಜೆಪಿ ನಾಯಕರಿಗೆ ತಿಳಿ ಹೇಳಿದ್ದಾರೆ.
“ಎರಡನೆಯದಾಗಿ, ಕೇಂದ್ರದಲ್ಲಿ ಮನಮೋಹನ್ ಸಿಂಗ್ ಸರ್ಕಾರವಿದ್ದಾಗ ಸಂವಿಧಾನಕ್ಕೆ 104ನೇ ತಿದ್ದುಪಡಿ ಮಾಡಿ ಸರ್ಕಾರಿ ಮತ್ತು ಖಾಸಗಿ ಕ್ಷೇತ್ರದಲ್ಲಿರುವ ಐಐಟಿ ಮತ್ತು ಐಐಎಂ ಸೇರಿದಂತೆ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ಜಾತಿಗಳಿಗೆ ಮೀಸಲಾತಿಯನ್ನು ಜಾರಿಗೆ ತರಲಾಯಿತು. ವಿ.ಪಿ. ಸಿಂಗ್ ಅವರು ಮಂಡಲ್ ವರದಿ ಅನುಷ್ಠಾನದ ಮೂಲಕ ಹಿಂದುಳಿದ ಜಾತಿಗಳಿಗೆ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಿದ್ದರು. ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವರಾಗಿದ್ದ ಅರ್ಜುನ್ ಸಿಂಗ್ ಅವರು ಶಿಕ್ಷಣ ಕ್ಷೇತ್ರದಲ್ಲಿಯೂ ಹಿಂದುಳಿದ ಜಾತಿಗಳಿಗೆ ಸಂವಿಧಾನಕ್ಕೆ 104ನೇ ತಿದ್ದುಪಡಿಯ ಮೂಲಕ ಮೀಸಲಾತಿ ಕಲ್ಪಿಸಿದ್ದರು” ಎಂದು ಸಿದ್ದರಾಮಯ್ಯ ಬಿಜೆಪಿ ನಾಯಕರಿಗೆ ಪಾಠ ಮಾಡಿದ್ದರೆ.
ಹಿಂದೆ ಮೀಸಲಾತಿ ವಿರೋಧಿಸಿದ್ದ ಬಿಜೆಪಿ

“ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸರ್ಕಾರ ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ನೀಡುವ ನಿರ್ಧಾರ ಕೈಗೊಂಡಾಗ ಅದನ್ನು ವಿರೋಧಿಸಿದ್ದು ಬಿಜೆಪಿ. ಭಾರತೀಯ ಜನತಾ ಪಾರ್ಟಿ ಸೈದ್ಧಾಂತಿಕವಾಗಿ ಸಾಮಾಜಿಕ ನ್ಯಾಯ ಮತ್ತು ಮೀಸಲಾತಿಗೆ ವಿರುದ್ಧವಾಗಿರುವ ಪಕ್ಷ. ಆರ್ ಎಸ್ ಎಸ್ ಸರಸಂಘ ಚಾಲಕ ಮೋಹನ್ ಭಾಗವತ ಅವರು ಬಹಿರಂಗವಾಗಿಯೇ ಮೀಸಲಾತಿ ವಿರೋಧಿಸಿ ಹೇಳಿಕೆ ನೀಡಿದ್ದರು. ದಿವಂಗತ ನ್ಯಾಯಮೂರ್ತಿ ರಾಮಾ ಜೋಯಿಸ್ ಅವರು ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ವಿರೋಧಿಸಿ ಕೋರ್ಟ್‌ಗೆ ಹೋಗಿದ್ದರು” ಎಂದು ಬಿಜೆಪಿ ನಾಯಕರಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ವಿವರಿಸಿದ್ದಾರೆ.
“ಹುಟ್ಟಿನಿಂದಲೇ ಮೀಸಲಾತಿ ವಿರೋಧಿಯಾಗಿರುವ ಬಿಜೆಪಿ ಈಗ ರಾಜಕೀಯ ಅನಿವಾರ್ಯತೆಗೆ ಸಿಕ್ಕಿ ಮೀಸಲಾತಿಯನ್ನು ಒಪ್ಪಿಕೊಂಡಿದೆ ಅಷ್ಟೆ. ನಮ್ಮದು ಬದ್ದತೆ, ಬಿಜೆಪಿಯದ್ದು ಆತ್ಮವಂಚನೆಯ ನಾಟಕ. ರಾಜ್ಯದ ವೈದ್ಯಕೀಯ ಕಾಲೇಜುಗಳಿಂದ ಶೇಕಡಾ 15ರಷ್ಟು ಸೀಟುಗಳನ್ನು ಅಖಿಲ ಭಾರತ ಕೋಟಾಕ್ಕಾಗಿ ಕಿತ್ತು ಕೊಂಡಿರುವುದೇ ಮಹಾದ್ರೋಹ. ಈ ನಿರ್ಧಾರವನ್ನು ಕೈಗೊಂಡಿದ್ದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ. ನಮ್ಮ ಭೂಮಿ, ನಮ್ಮವರ ತೆರಿಗೆ ಹಣದಿಂದ ನೀಡಿರುವ ವಿನಾಯಿತಿ-ರಿಯಾಯಿತಿಯಿಂದ ನಿರ್ಮಾಣಗೊಂಡ ವೈದ್ಯಕೀಯ ಕಾಲೇಜುಗಳ ಸೀಟನ್ನು ಬೇರೆ ರಾಜ್ಯಗಳ ವಿದ್ಯಾರ್ಥಿಗಳಿಗೆ ಯಾಕೆ ಉಡುಗೊರೆಯಾಗಿ ನೀಡಬೇಕು? ಬಿಜೆಪಿ ನಾಯಕರು ಉತ್ತರಿಸಿ” ಎಂದು ರಾಜ್ಯ ಬಿಜೆಪಿ ನಾಯಕರಿಗೆ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.ಉತ್ತರ ಪ್ರದೇಶ ಚುನಾವಣೆ ಕಾರಣ

“ಅಖಿಲ ಭಾರತ ಕೋಟಾಕ್ಕಾಗಿ ರಾಜ್ಯದ ಮೆಡಿಕಲ್ ಕಾಲೇಜುಗಳ ಸೀಟುಗಳನ್ನು ಕೇಂದ್ರ ಸರ್ಕಾರ ಕಿತ್ತುಕೊಳ್ಳುವುದನ್ನು ನಾನು ಮುಖ್ಯಮಂತ್ರಿ ಆಗಿರುವಾಗಲೇ ವಿರೋಧಿಸಿದ್ದೆ. ತಮಿಳುನಾಡು ಸರ್ಕಾರ ಕೇಂದ್ರದ ನಿರ್ಧಾರವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದೆ. ಅದರ ಮುಂದಿನ ವಿಚಾರಣೆ ಆಗಸ್ಟ್ 3ಕ್ಕೆ ಇದೆ. ನ್ಯಾಯಾಲಯದ ತೀರ್ಪಿನಿಂದ ಮುಖ ಉಳಿಸಿಕೊಳ್ಳಲು ನರೇಂದ್ರ ಮೋದಿ ಸರ್ಕಾರ ಅಖಿಲ ಭಾರತ ಕೋಟಾದಡಿಯಲ್ಲಿಯೂ ಒಬಿಸಿಗಳಿಗೆ ಶೇಕಡಾ 27ರಷ್ಟು ಮೀಸಲಾತಿಯನ್ನು ಘೋಷಿಸಿದೆ. ಹಿಂದುಳಿದ ಜಾತಿಯ ಬಗ್ಗೆ ಪ್ರಧಾನಿಗಳ ಈ ಕಾಳಜಿಯ ನಾಟಕಕ್ಕೆ ಮುಂಬರುವ ಉತ್ತರಪ್ರದೇಶದ ವಿಧಾನಸಭಾ ಚುನಾವಣೆಯೂ ಕಾರಣವಾಗಿರಬಹುದು. ಉಳಿದಂತೆ ಪ್ರಧಾನಿಯವರ ಈ ಘೋಷಣೆಯಲ್ಲಿ ಯಾವುದೇ ಬದ್ದತೆ ಇಲ್ಲ” ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ