ಬಳ್ಳಾರಿ: ಕಳೆದ ಎರಡು ತಿಂಗಳ ಲಾಕ್ ಡೌನ್‍ನಿಂದಾಗಿ ಸಾರಿಗೆ ಇಲಾಖೆ ಸಾಕಷ್ಟು ನಷ್ಟ ಅನುಭವಿಸಿದೆ. ಆದರೆ ಆ ನಷ್ಟವನ್ನು ಸರಿದೂಗಿಸಲು ಸದ್ಯಕ್ಕೆ ಕಷ್ಟ ಸಾಧ್ಯ. ಹೀಗಾಗಿ ಸಾರಿಗೆ ನೌಕರರನ್ನು ಕೆಲಸದಿಂದ ತೆಗೆದು ಹಾಕುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಆದರೆ ಅದು ಶುದ್ಧ ಸುಳ್ಳು. ಯಾವ ನೌಕರರು ಹೆದರುವ ಅವಶ್ಯಕತೆ ಇಲ್ಲಾ ಎಂದು ಸಾರಿಗೆ ಸಚಿವ ಹಾಗೂ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.
ಬಳ್ಳಾರಿಯಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರಿಗೆ ಇಲಾಖೆ ಲಾಕ್ ಡೌನ್ ನಿಂದಾಗಿ 1,800 ಕೋಟಿ ರೂ. ನಷ್ಟು ಅನುಭವಿಸಿದೆ. ಆದರೆ ಈಗ ಸಾರಿಗೆ ಆರಂಭ ಮಾಡಿದ ಮೇಲೂ ನಾಲ್ಕು ನಿಗಮಗಳಲ್ಲಿ ಪ್ರತಿ ದಿನ 24 ಕೋಟಿ ನಷ್ಟು ಆಗುತ್ತಿದೆ ಎಂದರು.
ನಾವು ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರಯಾಣ ಮಾಡಬೇಕಿದೆ. ಪ್ರತಿ ಕಿಲೋಮೀಟರ್ ಗೆ 22 ರೂಪಾಯಿ ಹೊರೆ ಬೀಳಲಿದೆ. ಹೀಗಾಗಿ ನೌಕರರಿಗೆ ಸಂಬಳ ಕೊಡುವಷ್ಟು ಹಣ ಸಂಗ್ರಹ ಆಗುತ್ತಿಲ್ಲ. ಹೀಗಾಗಿ ಸರ್ಕಾರವೇ ಸಾರಿಗೆ ನೌಕರರ ಸಂಬಳ ನೀಡಬೇಕು. ಈ ವಿಷಯವಾಗಿ ಸಿಎಂ ಜೊತೆ ಮಾತುಕತೆ ನಡೆಸಿ ತೀರ್ಮಾನ ಮಾಡಲಾಗುವುದು ಎಂದಿದ್ದಾರೆ.
ಸಾರಿಗೆ ಇಲಾಖೆಯ ಕೆಲ ಹುದ್ದೆಗಳನ್ನು ತೆಗೆದು ಹಾಕಿ ಅನಾವಶ್ಯಕ ಸಂಬಳಕ್ಕೆ ಕಡಿವಾಣ ಹಾಕಲಾಗುವುದು. ತೆಗೆದು ಹಾಕಿದ ಹುದ್ದೆಗಳನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಿ ವೆಚ್ಚ ಕಡಿಮೆ ಮಾಡುಲಾಗುವುದು. ಇನ್ನು ಎರಡು ದಿನಗಳಲ್ಲಿ ಎಲ್ಲ ಕಡೆಗೆ ಬಸ್ ಸಂಚಾರ ಆರಂಭ ಮಾಡಲು ಚಿಂತನೆ ನಡೆಸಲಾಗಿದೆ. ಆದರೆ ಕೆಂಪು ವಲಯದಲ್ಲಿ ಬಸ್ ಸೇವೆ ಆರಂಭ ಮಾಡುವುದು ಸದ್ಯಕ್ಕೆ ಯೋಚನೆ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
https://youtu.be/OYEMtBeW6b0