Breaking News

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 8ನೇ ಘಟಿಕೋತ್ಸವ,ರಾಜ್ಯಪಾಲರಿಂದ ಗೌರವ ಡಾಕ್ಟರೇಟ್ ಪ್ರದಾನ

Spread the love

ಬೆಳಗಾವಿ: ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 8ನೇ ಘಟಿಕೋತ್ಸವ ಸಮಾರಂಭದಲ್ಲಿ ಘನತೆವೆತ್ತ ರಾಜ್ಯಪಾಲರಾದ  ವಾಜುಭಾಯ್  ರೂಡಾಭಾಯ್ ವಾಲಾರವರು ರ್ಯಾಂಕ್ ವಿಜೇತರಿಗೆ ಸುವರ್ಣ ಪದಕಗಳು, 79 ಜನರಿಗೆ ಪಿಎಚ್.ಡಿ ಮತ್ತು ಗಣ್ಯರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು.

ಸುವರ್ಣ ವಿಧಾನಸೌಧದ ಆಡಿಟೋರಿಯಂ ಸಭಾಂಗಣದಲ್ಲಿ ಸೋಮವಾರ (ಅ.5) ಜರುಗಿದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 8ನೇ ಘಟಿಕೋತ್ಸವದ ಸಮಾರಂಭದಲ್ಲಿ ಸುವರ್ಣ ಪದಕಗಳು ಮತ್ತು ಪದವಿಗಳನ್ನು ಪ್ರದಾನ ಮಾಡಲಾಯಿತು.

ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಆನ್ ಲೈನ್ ಮೂಲಕವೇ ಘಟಿಕೋತ್ಸವ ಭಾಷಣ ಮಾಡಿದ ಬೆಂಗಳೂರಿನ ನ್ಯಾಕ್ ನಿರ್ದೇಶಕರಾದ ಪ್ರೊ.ಎಸ್.ಸಿ. ಶರ್ಮಾ, ರಾಷ್ಟ್ರ ನಿರ್ಮಾಣದ ಪ್ರಕ್ರಿಯೆಯಲ್ಲಿ ರಾಷ್ಟ್ರೀಯವಾದ ಅಥವಾ ರಾಷ್ಟ್ರೀಯತೆಯ ಪಾತ್ರ ಪ್ರಮುಖ ಪಾತ್ರ ವಹಿಸಲಿದೆ ಎಂದರು.   

ನವ ಪದವೀಧರರು ದೇಶದ ಪ್ರಗತಿಯ ಚಕ್ರಗಳಿದ್ದಂತೆ. ಆದ್ದರಿಂದ ಎಲ್ಲರೂ ಭಾರತೀಯತೆಯನ್ನು ಮೈಗೂಡಿಸಿಕೊಂಡು ಭವಿಷ್ಯದ ನಾಯಕರಾಗಿ ಹೊರಹೊಮ್ಮಬೇಕು ಎಂದು ಪ್ರೊ.ಶರ್ಮಾ ಕರೆ ನೀಡಿದರು.

 

ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಂ.ರಾಮಚಂದ್ರಗೌಡ, ವಿಶ್ವವಿದ್ಯಾಲಯ ನಡೆದು ಬಂದ ದಾರಿ ಹಾಗೂ ಸಾಧನೆಯನ್ನು ಮೆಲುಕು ಹಾಕಿದರು.

ಸರ್ಕಾರವು ವಿಶ್ವವಿದ್ಯಾಲಯಕ್ಕೆ ಹಿರೇಬಾಗೇವಾಡಿಯಲ್ಲಿ 127 ಎಕರೆ ಜಾಗೆ ನೀಡಿರುವುದರಿಂದ  ಮುಂಬರುವ ದಿನಗಳಲ್ಲಿ ವಿಶ್ವವಿದ್ಯಾಲಯ ಅಭಿವೃದ್ಧಿಗೆ ಅನುಕೂಲವಾಗಲಿದೆ ಎಂದು ಕುಲಪತಿ ರಾಮಚಂದ್ರಗೌಡ ಹೇಳಿದರು.

ಕುಲಸಚಿವ ಪ್ರೊ. ಬಸವರಾಜ ಪದ್ಮಶಾಲಿ, ಅತಿಥಿಗಳನ್ನು ಪರಿಚಯಿಸಿದರು. ಕುಲಸಚಿವ ಪ್ರೊ. ಎಸ್.ಎಂ.ಹುರಕಡ್ಲಿ ದಂಡಧಾರಿಯಾಗಿ ಘಟಿಕೋತ್ಸವದ ಮೆರವಣಿಗೆಯ ನೇತೃತ್ವ ವಹಿಸಿದ್ದರು.

ಗೌರವ ಡಾಕ್ಟರೇಟ್:

ಘಟಿಕೋತ್ಸವ ಸಮಾರಂಭದಲ್ಲಿ ಕ್ರೀಡಾ ಮತ್ತು ಸಮಾಜ ಸೇವೆಯ ಕ್ಷೇತ್ರಕ್ಕಾಗಿ ಗೋವಿಂದರಾಜ್ ಹಾಗೂ ಧಾರ್ಮಿಕ ಮತ್ತು ಸಮಾಜೋ-ಶೈಕ್ಷಣಿಕ ಕ್ಷೇತ್ರಕ್ಕಾಗಿ ಹುಬ್ಬಳ್ಳಿಯ ಶ್ರೀಮನ್ ಮಹಾರಾಜ ನಿರಂಜನ ಜಗದ್ಗುರು ರಾಜಯೋಗೀಂದ್ರ ಮಹಾಸ್ವಾಮಿಗಳು ಅವರಿಗೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವತಿಯಿಂದ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು.

ಘನತೆವೆತ್ತ ರಾಜ್ಯಪಾಲರಾದ ವಜೂಭಾಯ್ ರೂಡಾಭಾಯ್ ವಾಲಾರವರು ಗಣ್ಯರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿ ಅಭಿನಂದನೆ ಸಲ್ಲಿಸಿದರು.

33,974 ಜನರಿಗೆ ಪದವಿ:

ಸದರಿ ಘಟಿಕೋತ್ಸವದಲ್ಲಿ ಸ್ನಾತಕ ಪದವಿ ಪಡೆದ 31262 ವಿದ್ಯಾರ್ಥಿಗಲ್ಲಿ 77 ಜನ ವಿದ್ಯಾರ್ಥಿಗಳು ರ್ಯಾಂಕ ಪಡೆದಿದ್ದು, 11 ಜನರಿಗೆ ಘಟಿಕೋತ್ಸವದಲ್ಲಿ ಪ್ರಮಾಣ ಪತ್ರ ಪ್ರದಾನ ಮಾಡಲಾಯಿತು.

ಸ್ನಾತಕೋತ್ತರ ಪದವಿ ಪಡೆದ 2712 ವಿದ್ಯಾರ್ಥಿಗಳಲ್ಲಿ 68 ವಿದ್ಯಾರ್ಥಿಗಳು ರ್ಯಾಂಕ್ ಪಡೆಸಿದ್ದು, 22 ವಿದ್ಯಾರ್ಥಿಗಳಿಗೆ ಘಟಿಕೋತ್ಸವದಲ್ಲಿ ಪ್ರಮಾಣ ಪತ್ರ ನೀಡಲಾಯಿತು. ಸ್ನಾತಕ ಹಾಗೂ ಸ್ನಾತಕೋತ್ತರ ತರಗತಿಯ ಒಟ್ಟು 33,974 ವಿದ್ಯಾರ್ಥಿಗಳು ಪದವಿಯನ್ನು ಘನತೆವೆತ್ತ ರಾಜ್ಯಪಾಲರು ಪ್ರಕಟಿಸಿದರು.

ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಪೊಲೀಸ್ ಆಯುಕ್ತ ತ್ಯಾಗರಾಜನ್, ಕರ್ನಾಟಕ ಮಾಹಿತಿ ಆಯೋಗದ ಬೆಳಗಾವಿ ಪೀಠದ ಆಯುಕ್ತರಾದ ಗೀತಾ ಬಿ.ವಿ., ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ಎಚ್.ವಿ., ವಿಶ್ವವಿದ್ಯಾಲಯದ ಸಿಂಡಿಕೇಟ್, ವಿದ್ಯಾವಿಷಯಕ ಪರಿಷತ್ತಿನ ಸದಸ್ಯರು ಮತ್ತು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಘಟಿಕೋತ್ಸವದಲ್ಲಿ ಪಾಲ್ಗೊಂಡಿದ್ದರು.


Spread the love

About Laxminews 24x7

Check Also

ಕಾಮಗಾರಿ ಮುಗಿಸಿ ಒಂದೂವರೆ ವರ್ಷ ಕಳೆದರೂ ದುಡ್ಡು ಕೊಡ್ತಿಲ್ಲ

Spread the loveದಾವಣಗೆರೆ: ಕಾಮಗಾರಿ ಮುಗಿಸಿ ಒಂದೂವರೆ ವರ್ಷ ಕಳೆದರು ಅನುದಾನ ಬಿಡುಗಡೆಯಾಗಿಲ್ಲ. ವಯಸ್ಸಿಗೆ ಬಂದಿರುವ ಮಗಳಿಗೆ ಮದುವೆ ಮಾಡಲು ಹಣ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ