ಕಿತ್ತೂರು: ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನನನ್ನು ಆಯ್ಕೆ ಮಾಡಿದಲ್ಲಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪ್ರಯತ್ನಿಸುತ್ತೇನೆ ಎಂದು ವಿಧಾನ ಪರಿಷತ್ ಚುನಾವಣೆಯ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಹೇಳಿದರು.
ತಾಲೂಕಿನ ಎಂ.ಕೆ.ಹುಬ್ಬಳ್ಳಿ ಪಟ್ಟಣದಲ್ಲಿ ಜನಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದ ಅವರು, ರಾಜಕಾರಣಿಗಳು ಕೇವಲ ಮತ ಕೇಳಲು ಮಾತ್ರ ತಮ್ಮಲ್ಲಿ ಬರುತ್ತಾರೆ. ಚುನಾಯಿತರಾದ ನಂತರ ಅವರ ಇತ್ತ ತಲೆ ಕೂಡ ಹಾಕುವದಿಲ್ಲ. ಅವರಂತೆ ನಾನಲ್ಲ ನನ್ನನ್ನು ಆಯ್ಕೆ ಮಾಡಿ ಕಳುಹಿಸಿದಲ್ಲಿ ಕ್ಷೇತ್ರದ ಅಭಿವೃದ್ಧಿಯ ಜೊತೆೆ ಗ್ರಾ.ಪಂ ಸದಸ್ಯರ ಗೌರವಧನ ಹೆಚ್ಚಿಸಲು ಕ್ರಮವಹಿಸುತ್ತೇನೆ ಎಂದು ಭರವಸೆ ನೀಡಿದ ಲಖನ್ ಗ್ರಾ.ಪಂ ಮಟ್ಟದ ಸಮಸ್ಯೆಗಳಿಗೆ ನಾನು ಧ್ವನಿಯಾಗಿ ನಿಲ್ಲುವೆ. ನಿಮ್ಮೆಲ್ಲರ ಪರವಾಗಿ ಅನುದಾನ ಹೆಚ್ಚಿಸುವಂತೆ ಒತ್ತಡ ಹಾಕುತ್ತೇನೆ. ನೀವೆಲ್ಲ ಸ್ವಇಚ್ಛೆಯಿಂದ ನನಗೆ ಮತ ನೀಡಿ ನನ್ನನ್ನು ಗೆಲ್ಲಿಸಬೇಕು. ಅಭಿವೃದ್ಧಿ ಕಾರ್ಯ ಮಾಡುವ ವ್ಯಕ್ತಿಯನ್ನು ಬೆಂಬಲಿಸಬೇಕು ಎಂದರು.
ಜಿ.ಪಂ ಮಾಜಿ ಸದಸ್ಯ ನಿಂಗಪ್ಪ ಹಣಜಿ ಮಾತನಾಡಿ, ಪಕ್ಷಭೇದ ಮರೆತು ಲಖನ್ ಜಾರಕಿಹೊಳಿ ಅವರಿಗೆ ಮೊದಲ ಪ್ರಾಶಸ್ತ್ಯದ ಮತ ನೀಡಿ ಬಹುಮತದಿಂದ ಗೆಲ್ಲಿಸಬೇಕು ಎಂದು ವಿನಂತಿಸಿಕೊಂಡರು.
ಜಿ.ಪಂ ಮಾಜಿ ಉಪಾಧ್ಯಕ್ಷ ತುಕಾರಾಮ್ ಕಾಗಲ್, ಗ್ರಾ.ಪಂ ಅಧ್ಯಕ್ಷ ಅಶೋಕ ಮಾಳಗಿ, ಗ್ರಾಪಂ ಸದಸ್ಯರು ಹಾಜರಿದ್ದರು.