ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಮೆಲ್ಕಾರ್ ನಲ್ಲಿ ನಿನ್ನೆ ರಾತ್ರಿ ಉಮರ್ ಫಾರೂಕ್ ಎಂಬಾತನನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದು. ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಪೊಲೀಸರು ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.
ಪ್ರಮುಖ ಆರೋಪಿ ಖಲೀಲ್ ಹಾಗೂ ಆತನ ಇಬ್ಬರು ಸಹಚರರು ಬೆಂಗಳೂರಿಗೆ ತೆರಳಲು ಯತ್ನಿಸುತ್ತಿರುವ ಮಾಹಿತಿ ಆಧರಿಸಿ ಪೊಲೀಸರು ಅವರನ್ನು ಬೆನ್ನಟ್ಟಿ ಹೋಗಿದ್ದು, ಗುಂಡ್ಯ ಸಮೀಪದಲ್ಲಿ ಖಲೀಲ್ ಪೊಲೀಸರ ಮೇಲೆ ತಲವಾರು ಬೀಸಿದ್ದಾನೆ ಎಂದು ಹೇಳಲಾಗಿದೆ. ಈ ಸಂದರ್ಭ ಬಂಟ್ವಾಳ ನಗರ ಠಾಣಾ ಎಸ್ ಐ ಅವಿನಾಶ್ ಗುಂಡಿನ ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ.
ಗುಂಡಿನ ದಾಳಿ ವೇಳೆ ಗ್ರಾಮಾಂತರ ಎಸ್ ಐ ಪ್ರಸನ್ನ ಅವರಿಗೂ ಗಾಯವಾಗಿದ್ದು, ಅವರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಖಲೀಲ್ ನ ಜೊತೆಗಿದ್ದ ಹಫೀಝ್ ಮತ್ತು ಇನ್ನೋರ್ವ ಆರೋಪಿ ಸಮೀಪದ ಕಾಡು ಪ್ರದೇಶಕ್ಕೆ ಓಡಿ ತಪ್ಪಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.