ಕಲಬುರಗಿ: ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಡಿಸ್ಚಾರ್ಜ್ ಆಗುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದ್ದು, ಕಲಬುರಗಿಯಲ್ಲಿ ಇಂದು ಮತ್ತಿಬ್ಬರು ಬಿಡುಗಡೆಯಾಗಿದ್ದಾರೆ. ಇದರ ಬೆನ್ನಲ್ಲೇ ಒರ್ವ ಪೊಲೀಸ್ ಪೇದೆಗೂ ಕೊರೊನಾ ವಕ್ಕರಿಸಿದ್ದು, ಜಿಲ್ಲೆಯ ಜನರಲ್ಲಿ ಆತಂಕ ಸೃಷ್ಟಿಸಿದೆ.
ಕಲಬುರಗಿಯ ಮಹೆಬೂಬ್ ನಗರದ 50 ವರ್ಷದ ಪುರುಷ (ರೋಗಿ ಸಂಖ್ಯೆ-394) ಹಾಗೂ ಮೋಮಿನಪುರ ಪ್ರದೇಶದ 19 ವರ್ಷದ ಯುವಕ (ರೋಗಿ ಸಂಖ್ಯೆ-395) ಕೊರೊನಾ ಸೋಂಕಿನಿಂದ ಗುಣಮುಖರಾದ ಹಿನ್ನೆಲೆಯಲ್ಲಿ ಬುಧವಾರ ಇಎಸ್‍ಐ ಆಸ್ಪತ್ರೆಯಿಂದ ಡಿಸ್ಚಾಜ್9 ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಶರತ್.ಬಿ ತಿಳಿಸಿದರು.
ಕಲಬುರಗಿಯ ಮೆಹಬೂಬ್ ನಗರದ ನಿವಾಸಿ ರೋಗಿ ಸಂಖ್ಯೆ-394 ವ್ಯಕ್ತಿ ರೋಗಿ ಸಂಖ್ಯೆ-177 ಜೊತೆ ಸಂಪರ್ಕ ಹೊಂದಿದ್ದ. ಸೋಂಕಿನಿಂದ ಮೃತಪಟ್ಟಿದ್ದ ರೋಗಿ ಸಂಖ್ಯೆ-205 ಜೊತೆ ರೋಗಿ ಸಂಖ್ಯೆ-395 ಯುವಕ ಸಂಪರ್ಕ ಹೊಂದಿದ್ದ. ಏ.20ರಂದು ಇವರಿಬ್ಬರಿಗೂ ಕೊರೊನಾ ಸೋಂಕು ತಗುಲಿರುವುದು ದೃಢವಾಗಿತ್ತು. ನಂತರ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದರು.
ಕಲಬುರಗಿ ಜಿಲ್ಲೆಯಲ್ಲಿ ಈ ವರೆಗೆ ಕೊರೊನಾ ಪಾಸಿಟಿವ್ ಪತ್ತೆಯಾದ 64 ಪ್ರಕರಣಗಳ ಪೈಕಿ 24 ರೋಗಿಗಳು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಉಳಿದಂತೆ 6 ಜನ ಸಾವನ್ನಪ್ಪಿದ್ದು, 34 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಡಿ.ಸಿ. ಶರತ್ ಬಿ. ವಿವರಿಸಿದರು.
ಪೊಲೀಸ್ ಪೇದೆಗೂ ಕೊರೊನಾ
ಕಲಬುರಗಿಯ 52 ವರ್ಷದ ಪೊಲೀಸ್ ಪೇದೆಗೂ ಕೊರೊನಾ ವಕ್ಕರಿಸಿದ್ದು, ಕೆಎಸ್‍ಆರ್‍ಪಿಯಲ್ಲಿ ಪೇದೆಯಾಗಿರುವ ಗಾಜಿಪುರ ನಿವಾಸಿಗೆ ಸೋಂಕಿರುವುದು ದೃಢಪಟ್ಟಿದೆ. ಪೊಲೀಸ್ ಪೇದೆ ರೋಗಿ ಸಂಖ್ಯೆ-610 ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದ್ದ. ಕೆಎಸ್‍ಆರ್‍ಪಿ ಪೇದೆ ರೋಗಿ ಸಂಖ್ಯೆ 610 ವೃದ್ದನ ಮನೆ ಪಕ್ಕ ವಾಸವಿದ್ದ. ಹೀಗಾಗಿ ಸೊಂಕಿತ ವೃದ್ಧನಿಂದ ರೋಗಿ ಸಂಖ್ಯೆ-679 ಪೇದೆಗೂ ಸೊಂಕು ತಗುಲಿದೆ. ಸೊಂಕಿತನನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಇಎಸ್‍ಐ ಆಸ್ಪತ್ರೆಗೆ ದಾಖಲಿಸಿದ್ದಾರೆ.