ಕಲಬುರಗಿ: ಲಾಕ್‍ಡೌನ್ ನಿಯಮ ಮೀರಿ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಿದ್ದವರಿಗೆ ಕಲಬುರಗಿಯ ಪೊಲೀಸರು ಬಿಸಿಮುಟ್ಟಿಸಿದ್ದಾರೆ.
ಸೇಡಂ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ಮಸೀದಿಯಲ್ಲಿ ಸುಮಾರು 15 ಜನರು ನಮಾಜ್ ಮಾಡುತ್ತಿದ್ದರು. ಈ ಕುರಿತು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಲಾಠಿ ರುಚಿ ತೋರಿಸಿ, ಎಲ್ಲ 15 ಮಂದಿಯನ್ನೂ ಬಂಧಿಸಿದ್ದಾರೆ.
ಈ ಸಂಬಂಧ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದರೂ ಸಾಮೂಹಿಕ ಪ್ರಾರ್ಥನೆ ನಡೆಸಿದ್ದಕ್ಕೆ ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಂಗಳವಾರದ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ 44 ಜನರಿಗೆ ಸೋಂಕು ತಗುಲಿದ್ದು, ಈ ಪೈಕಿ 7 ಮಂದಿ ಗುಣಮುಖರಾಗಿದ್ದಾರೆ. ಇನ್ನೂ 32 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಈವರೆಗೂ ಐವರು ಕೊರೊನಾಗೆ ಬಲಿಯಾಗಿದ್ದಾರೆ. ಹೀಗಿದ್ದರೂ ಜಿಲ್ಲೆಯ ಜನರು ಎಚ್ಚೆತ್ತುಕೊಳ್ಳದೇ ಇರುವುದು ಬೇಸರದ ಸಂಗತಿಯಾಗಿದೆ.
ಕಲಬುರಗಿಯ ಕಮರ್ ಕಾಲೋನಿ ನಿವಾಸಿ ರೋಗಿ-425 ಮಹಿಳೆಯ ನಾಲ್ಕು ತಿಂಗಳ ಹೆಣ್ಣು ಮಗುವಿಗೆ ಈ ಮೊದಲು ಸೋಂಕು ದೃಢಪಟ್ಟಿತ್ತು. ಇದರಿಂದಾಗಿ ಮಗುವಿನಿಂದ ತಾಯಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಆಕೆಗೂ ಕೊರೊನಾ ಪಾಸಿಟಿವ್ ಬಂದಿತ್ತು. ಮಹಿಳೆಯಿಂದ ಕಲಬುರಗಿಯ ಆರು ಜನರಿಗೆ ಸೋಂಕು ಹರಡಿರುವುದು ಮಂಗಳವಾರ ದೃಢಪಟ್ಟಿದ್ದು, ಎಲ್ಲರನ್ನೂ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ಕೊಡಲಾಗುತ್ತಿದೆ.