ಹುಬ್ಬಳ್ಳಿ: ಕಿಮ್ಸ್ ಆಸ್ಪತ್ರೆಯ ಮತ್ತೊಂದು ಎಡವಟ್ಟು ಬೆಳಕಿಗೆ ಬಂದಿದ್ದು, ಆಸ್ಪತ್ರೆಯಲ್ಲಿ ಕೆಲಸ ಮಾಡುವ ಭದ್ರತಾ ಸಿಬ್ಬಂದಿಗೆ ಸೂಕ್ತ ಸೌಲಭ್ಯಗಳಿಲ್ಲದೆ ಭಯದಿಂದಲೇ ಕೆಲಸ ಮಾಡುವಂತಾಗಿದೆ.
ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಭದ್ರತಾ ಸಿಬ್ಬಂದಿ ಸೂಕ್ತ ಸೌಲಭ್ಯಗಳ ಕೊರತೆಯ ನಡುವೆ, ಜೀವನದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ಆಸ್ಪತ್ರೆಗೆ ಬರುವ ಸಾರ್ವಜನಿಕರನ್ನು ಥರ್ಮಲ್ ಸ್ಕ್ರೀನಿಂಗ್ ಮಾಡದೆ, ಒಳಗೆ ಬಿಡಲಾಗುತ್ತಿದೆ. ಇದರಿಂದಾಗಿ ಸೋಂಕಿತರು ಆಸ್ಪತ್ರೆ ಪ್ರವೇಶ ಮಾಡುವ ಆತಂಕ ಎದುರಾಗಿದೆ. ಇದು ಹಳೆಯ ಕಿಮ್ಸ್ ಕಟ್ಟಡವಾಗಿದ್ದು, ಇದರ ಪಕ್ಕದಲ್ಲಿರುವ ಹೊಸ ಸೂಪರ್‍ಸ್ಪೆಷಾಲಿಟಿ ಆಸ್ಪತ್ರೆಯ ಕಟ್ಟಡವನ್ನು ಕೋವಿಡ್-19 ಆಸ್ಪತ್ರೆಯನ್ನಾಗಿ ಮಾಡಲಾಗಿದೆ. ಕೋವಿಡ್-19 ಆಸ್ಪತ್ರೆಯವರು ಯಾರಾದರೂ ಈ ಹಳೆ ಕಟ್ಟಡ ಪ್ರವೇಶಿಸಿದರೆ ಎಂಬ ಆತಂಕ ಕಾಡುತ್ತಿದೆ.
ಸಾರ್ವಜನಿಕರನ್ನು ತಪಾಸಣೆ ಮಾಡಲು ಕನಿಷ್ಟ ಥರ್ಮಲ್ ಸ್ಕ್ರೀನಿಂಗ್ ಸಾಧನ ಸಹ ಇಲ್ಲಿಲ್ಲ. ಅಲ್ಲದೆ ಭದ್ರತಾ ಸಿಬ್ಬಂದಿಗೆ ಸ್ಯಾನಿಟೈಸರ್, ಹ್ಯಾಂಡ್ ಗ್ಲೌಸ್ ಇಲ್ಲ. ಭಯದ ವಾತಾವರಣದಲ್ಲೇ ಭದ್ರತಾ ಸಿಬ್ಬಂದಿ ಕಾರ್ಯನಿರ್ವಹಿಸುವಂತಾಗಿದೆ. ಹೀಗಾಗಿ ಹಣಕೊಟ್ಟು ಮಾಸ್ಕ್ ಖರೀದಿಸಿ, ಹೊಕಿಕೊಂಡು ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಕೆಲಸ ಮಾಡುತ್ತಿದ್ದಾರೆ.
ಕಿಮ್ಸ್ ಆಸ್ಪತ್ರೆಯ ಆಡಳಿತ ಮಂಡಳಿ ಭದ್ರತಾ ಸಿಬ್ಬಂದಿ ಆರೋಗ್ಯದ ಬಗ್ಗೆ, ಸೌಲಭ್ಯಗಳ ಬಗ್ಗೆ ಚಿತ್ತ ಹರಿಸಿಲ್ಲ. ಆಸ್ಪತ್ರೆಯ ಆಹಾರ ಗೇಟ್ ಸೇರಿದಂತೆ ಪ್ರಮುಖ ಪ್ರವೇಶ ದ್ವಾರದಲ್ಲಿ ಅವ್ಯವಸ್ಥೆ ಇದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
https://youtu.be/OYEMtBeW6b0