ಬಾಗಲಕೋಟೆ: ನಿಮ್ಮ ಗ್ಯಾರಂಟಿಗಳು ಜನರಿಗೆ ಇಷ್ಟವಾಗಿದ್ದರೆ ನೀವು ಬಾಗಲಕೋಟೆಗೆ ಬಂದು ಐದು ದಿನ ಬಂದು ಪ್ರಚಾರ ಮಾಡುವ ಅವಶ್ಯಕತೆ ಇತ್ತಾ ಎಂದು ಪ್ರಶ್ನಿಸುವ ಮೂಲಕ ಮಾಜಿ ಸಿಎಂ, ಕೇಂದ್ರದ ಬೃಹತ್ ಕೈಗಾರಿಕಾ ಮತ್ತು ಉಕ್ಕು ಸಚಿವ ಹೆಚ್‌ಡಿ ಕುಮಾರಸ್ವಾಮಿ ಸಿಎಂ ಸಿದ್ದರಾಮಯ್ಯನವರಿಗೆ ತಿರುಗೇಟು ಕೊಟ್ಟಿದ್ದಾರೆ.
ಉಪಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪರ ಪ್ರಚಾರ ನಡೆಸಲು ಬಾಗಲಕೋಟೆಗೆ ಆಗಮಿಸಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಎರಡೂ ಚುನಾವಣಾ ಫಲಿತಾಂಶಕ್ಕಾಗಿ ಕಾಂಗ್ರೆಸ್ ನಾಯಕರು, ವಿಧಾನಸೌಧವನ್ನು ಬಿಕೋ ಎನ್ನುವಂತೆ ಮಾಡಿ ಪ್ರಚಾರ ಮಾಡುತ್ತಿದ್ದಾರೆ. ಗ್ಯಾರಂಟಿಗಳು ಜನರಿಗೆ ತಲುಪಿದ್ದರೆ ಇಷ್ಟೊಂದು ಪ್ರಚಾರ ಮಾಡುವ ಅಗತ್ಯ ಏನು ಎಂದು ಪ್ರಶ್ನಿಸಿದರು.
ನೀವು 2018 ರಲ್ಲಿ ಬಾದಾಮಿಯಿಂದ ಕೆಲವೇ ಮತಗಳಿಂದ ಗೆದ್ದಿದ್ದೀರಿ. ಗೆದ್ದ ನಂತರ ಬಾದಾಮಿಯನ್ನು ದತ್ತು ತೆಗೆದುಕೊಂಡು ಅಭಿವೃದ್ಧಿ ಪಡಿಸುತ್ತೇನೆ ಎಂದು ಭರವಸೆ ನೀಡಿದಿರಿ. ಭರವಸೆ ಮಾತ್ರ ನೀಡಿ ಯಾವುದೇ ಕೆಲಸ ಮಾಡಿಲ್ಲ ಎಂದು ಸಿದ್ದರಾಮಯ್ಯ ಅವರನ್ನು ದೂರಿದರು.
ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಸಾಲ ಮಾಡಿದೆ. ಗ್ಯಾರಂಟಿ ಖರ್ಚಿಗಿಂತ ಸಾಲ ಹೆಚ್ಚು ಮಾಡಿದ್ದಾರೆ. ಖಜಾನೆ ತುಂಬಿಸುತ್ತೇನೆ ಎಂದು ಗ್ಯಾರಂಟಿಗೆ ಹಣ ನೀಡಿದ್ದಾರೆ. ಈ ದೇಶದ ಇತಿಹಾಸದಲ್ಲಿ ಈ ರೀತಿಯ ಬಜೆಟ್ ಯಾರೂ ನೀಡಿಲ್ಲ ಎಂದು ವಾಗ್ದಾಳಿ ನಡೆಸಿದರು.
ದೇವೇಗೌಡರ ವೀಕ್ನೆಸ್ ಬಳಸಿ ಕಾಂಗ್ರೆಸ್ ಲಾಭ ಪಡೆದುಕೊಂಡಿತು. ದೇವೇಗೌಡರು 2006 ರಲ್ಲಿ ಸರಿಯಾದ ತೀರ್ಮಾನ ತಗೊಂಡಿದ್ದರೆ ಕಾಂಗ್ರೆಸ್ಸೇ ಇರುತ್ತಿರಲಿಲ್ಲ. ಕೊನೆಗೆ ನಾವು ಹೇಳಿದ್ದಕ್ಕಾದ್ರೂ ಆಶೀರ್ವಾದ ಮಾಡಿದ್ರೆ ಕಾಂಗ್ರೆಸ್ ಇರುತ್ತಿರಲಿಲ್ಲ ಎಂದರು.
Laxmi News 24×7