ಹೈದರಾಬಾದ್: ಅನುಮಾನಾಸ್ಪದ ರೀತಿಯಲ್ಲಿ ಶ್ರೀಕಾಕುಲಂ ಉಪ ಪೊಲೀಸ್ ವರಿಷ್ಠಾಧಿಕಾರಿ (ವಿಶೇಷ ವಿಭಾಗ) ಕೃಷ್ಣ ವರ್ಮಾ ಅವರು ವಿಶಾಖಪಟ್ಟಣಂನ ತಮ್ಮ ನಿವಾಸದಲ್ಲಿ ಶುಕ್ರವಾರ ಶವವಾಗಿ ಪತ್ತೆಯಾಗಿದ್ದಾರೆ.
ಡಿಎಸ್‍ಪಿ ಅವರ ಮಗನಿಗೆ ಆರೋಗ್ಯ ಸಮಸ್ಯೆಗಳಿದ್ದವು. ಹೀಗಾಗಿ ಡಿಎಸ್‍ಪಿ ಅವರ ಪತ್ನಿ ಮತ್ತು ಮಗ ಆಸ್ಪತ್ರೆಗೆ ಹೋಗಿದ್ದರು. ಡಿಎಸ್‍ಪಿ ವರ್ಮಾ ಮನೆಯಲ್ಲಿಯೇ ಇದ್ದರು. ಆದರೆ ಪತ್ನಿ ಮತ್ತು ಮಗ ಮನೆಗೆ ಹಿಂದಿರುಗಿ ಬಂದು ನೋಡಿದಾಗ ನೆಲದ ಮೇಲೆ ಬಿದ್ದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಶುಕ್ರವಾರ ಬೆಳಗ್ಗೆ ಸುಮಾರು 10.30 ರಿಂದ ಮಧ್ಯಾಹ್ನ 1.30ರ ನಡುವೆ ಸಾವು ಸಂಭವಿಸಿರಬಹುದು. ಮಧ್ಯಾಹ್ನ 2 ಗಂಟೆ ಸುಮಾರಿಗೆ ಪೊಲೀಸರಿಗೆ ಈ ಬಗ್ಗೆ ಮಾಹಿತಿ ತಿಳಿಸಲಾಗಿದೆ. ಸದ್ಯಕ್ಕೆ ಪೊಲೀಸರು ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿದ್ದಾರೆ. ವರದಿಯ ಪ್ರಕಾರ ಡಿಎಸ್‍ಪಿ ಆತ್ಮಹತ್ಯೆಗೆ ಶರಣಾಗಿರಬೇಕು ಎಂದು ಹೇಳಲಾಗಿದೆ.
ಡಿಎಸ್‍ಪಿ ಮನೆಯೊಳಗೆ ನೇಣು ಹಾಕಿಕೊಳ್ಳಲು ಹಗ್ಗ ಕಟ್ಟುವಾಗ ಕುರ್ಚಿ ಅಥವಾ ಟೇಬಲ್‍ನಿಂದ ಕೆಳಗೆ ಬಿದ್ದಂತೆ ಕಾಣುತ್ತದೆ. ಅಲ್ಲದೆ ಅವರ ಕುತ್ತಿಗೆಯಲ್ಲಿ ಹಗ್ಗದ ಗುರುತು ಇದೆ. ಪ್ರಕರಣ ಕುರಿತು ತನಿಖೆ ನಡೆಸುತ್ತಿದ್ದೇವೆ. ತನಿಖೆಯ ನಂತರ ಇದು ಆತ್ಮಹತ್ಯೆವೋ ಇಲ್ಲವೋ ಎಂಬುದು ತಿಳಿಯುತ್ತದೆ ಎಂದು ಸರ್ಕಲ್ ಇನ್ಸ್‌ಪೆಕ್ಟರ್ ಷಣ್ಮುಖ ರಾವ್ ತಿಳಿಸಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಿಂಗ್ ಜಾರ್ಜ್ ಆಸ್ಪತ್ರೆಗೆ ರವಾನಿಸಲಾಗಿದೆ. ವರ್ಮಾ ಅವರು ಆರೋಗ್ಯದ ಕಾರಣ ಕಳೆದ ಕೆಲವು ದಿನಗಳಿಂದ ರಜೆಯಲ್ಲಿದ್ದರು. ಅವರು ಶ್ವಾಸಕೋಶದ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕೃಷ್ಣ ವರ್ಮಾ ವೈಜಾಗ್‍ನ ಮೂರು ಠಾಣೆಯಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಆಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದ್ದರು. ಶ್ರೀಕಾಕುಲಂಗೆ ವರ್ಗಾವಣೆಯಾಗುವ ಮೊದಲು ವರ್ಮಾ ಅವರು ವೈಜಾಗ್‍ನಲ್ಲಿ ಪೊಲೀಸ್ ಸಹಾಯಕ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು.