ಹುಬ್ಬಳ್ಳಿ : ಹುಬ್ಬಳ್ಳಿಯ ಮೂರು ಸಾವಿರ ಮಠದ ಆಸ್ತಿಯನ್ನು ಕೆ ಎಲ್ ಇ ಸಂಸ್ಥೆಯವರು ವಾಪಸ್ ಮಠಕ್ಕೆ ನೀಡಬೇಕು ಎಂದು ಬಾಲೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ಆಗ್ರಹಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಮೂರು ಸಾವಿರ ಮಠದ ಆಸ್ತಿಯಲ್ಲಿ ನಗರದ ಗಬ್ಬೂರು ಬಳಿ ಕೆಎಲ್ ಇ ಸಂಸ್ಥೆ ವೈದ್ಯಕೀಯ ಕಾಲೇಜು ನಿರ್ಮಾಣ ಮಾಡಲಾಗುತ್ತಿದೆ. ಕೆಎಲ್‌ಇ ಸಂಸ್ಥೆಯವರಿಗೆ ಮಠದಿಂದ 24 ಎಕರೆ 30 ಗುಂಟೆ ಜಾಗ ಕೊಟ್ಟಿದ್ದು ತಪ್ಪು. ಮಠದ ಆಡಳಿತ ಮಂಡಳಿ ನೇತೃತ್ವದಲ್ಲೇ ಕಾಲೇಜು ಆರಂಭ ಆಗಲಿ ಎಂದಿದ್ದಾರೆ.
ಮಠದ ಪೀಠಾದಿಪತಿಗಳು ಆಸ್ತಿಯನ್ನು ಪರಭಾರೆ ಮಾಡಬಾರದು ಎಂದು 2009ರಲ್ಲಿ ಕಾನೂನು ಮಾಡಲಾಗಿದೆ. 2012ರಲ್ಲಿ ಕಾನೂನು ಉಲ್ಲಂಘಿಸಿ ಆಸ್ತಿಯನ್ನು ಕೆಎಲ್‌ಇಗೆ ಪರಭಾರೆ ಮಾಡಲಾಗಿದೆ. ನೂರಾರು ಕೋಟಿ ಬೆಲೆಬಾಳುವ ಆಸ್ತಿಯನ್ನು ಬೇರೆಯವರಿಗೆ ಉಚಿತವಾಗಿ ನೀಡಿದ್ದು ಸರಿಯಲ್ಲ. ಪ್ರಾಣ ಬೆದರಿಕೆ ಇದ್ದರೂ ನ್ಯಾಯಕ್ಕಾಗಿ ಹೋರಾಟ ಮುಂದುವರಿಸುವುದಾಗಿ ತಿಳಿಸಿದ್ದಾರೆ.
ಮಠದ ಆಸ್ತಿ ಹೊಡೆಯಲು ಬಹಳ ಜನರು ಒಂದೆಡೆ ಸೇರಿಕೊಂಡಿದ್ದಾರೆ. ಕಾಲೇಜು ನಿರ್ಮಾಣಕ್ಕೆ ಭೂಮಿ ಪೂಜೆ ಮಾಡಿದ್ದು ಕಾನೂನು ಬಾಹಿರ. ಮಠದ ಆಸ್ತಿ ಮಠಕ್ಕೆ ಇರಲಿ ಎಂಬುದು ನಮ್ಮ ಆಗ್ರಹ. ಈ ಕುರಿತು ಕಾನೂನು ಹೋರಾಟ ಮುಂದುವರಿಸುತ್ತೇವೆ. ಮಠದ ಆಡಳಿತದಲ್ಲೇ ಆಸ್ಪತ್ರೆ ಆಗೋದಾದ್ರೆ ನಾನೇ ಭಿಕ್ಷೆ ತಂದು ಕಾಲೇಜು ನಿರ್ಮಿಸುತ್ತೇನೆ ಎಂದಿದ್ದಾರೆ.