ಚಿಕ್ಕೋಡಿ : ಗೋಕಾಕ ಜಿಲ್ಲೆಯನ್ನಾಗಿಸಲು ಕಳೆದ 40 ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ಗೋಕಾಕ ಜಿಲ್ಲೆಗಾಗಿ ಪ್ರಾಣ ನೀಡಲು ಸಿದ್ದ ಅಂತಾ ಗೋಕಾಕ ಜಿಲ್ಲಾ ಹೋರಾಟ ಸಮಿತಿ ಸದಸ್ಯರು ಒಮ್ಮತದ ಅಭಿಪ್ರಾಯ ಮಂಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡ ಮಾತನಾಡಿ, ಗೋಕಾಕ ಜಿಲ್ಲೆಗಾಗಿ ಬ್ರಿಟಿಷ್ ಸರ್ಕಾರದ ಅವಧಿಯಿಂದಲೂ ಹೋರಾಟ, ಜಿಲ್ಲೆಯ ಕೂಗು ಇದೆ. ನಮ್ಮ ಜಿಲ್ಲಾ ಉಸ್ತುವಾರಿ ಸಚಿವರ ಮೇಲೆ ನಂಬಿಕೆ ಇಟ್ಟಿದ್ದೇವೆ. ಗೋಕಾಕ ಮತ್ತು ಚಿಕ್ಕೋಡಿ ಇವರಲ್ಲಿ ಯಾರಾದರೂ ಒಬ್ಬರು ಹಿಂದೆ ಸರಿಯಬೇಕು ಅಂತ ಹೇಳಬಾರದಿತ್ತು. ಇವರಿಗೆ ಸರ್ಕಾರ ಕೆಡುವುದಕ್ಕೆ ಶಕ್ತಿ ಇದೆ, ಜಿಲ್ಲಾ ಮಾಡೋಕೆ ಯಾಕೆ ಆಗಲ್ಲ ಎಂದು ಪ್ರಶ್ನಿಸಿದ್ದಾರೆ.
ಆನಂದ ಸಿಂಗ್ ಅವರು ಹೇಳಿದಕ್ಕೆ ಬಳ್ಳಾರಿ ವಿಭಜನೆ ಮಾಡಿ, ವಿಜಯನಗರ ಜಿಲ್ಲೆ ಮಾಡಿದ್ದಾರೆ. ನಿಮ್ಮ ಶಕ್ತಿ ಎಂತದ್ದು ಅಂತ ನಮಗೆ ಗೊತ್ತಿದೆ. ನೀವು ಒತ್ತಾಯ ಮಾಡಿದರೆ ಗೋಕಾಕ ಜಿಲ್ಲೆ ಖಂಡಿತ ಆಗುತ್ತದೆ. ಗೋಕಾಕ ಜಿಲ್ಲೆಯನ್ನಾಗಿ ಮಾಡಿದರೆ ಅಭಿನಂದಿಸುತ್ತೇವೆ. ಇಲ್ಲ ನಮ್ಮ ಹೋರಾಟ ನಿರಂತರ ಇರುತ್ತದೆ ಎಂದಿದ್ದಾರೆ.
ವಕೀಲ ಸಂಘದ ಅಧ್ಯಕ್ಷ ಸಿಂದಿಯವರು ಮಾತನಾಡಿ, ಗೋಕಾಕ ಅಥವಾ ಚಿಕ್ಕೋಡಿ ಒಬ್ಬರು ಹಿಂದೆ ಸರಿದರೆ, ಜಿಲ್ಲೆಯನ್ನಾಗಿ ಮಾಡಲಾಗುತ್ತದೆ ಎಂಬ ಹೇಳಿಕೆಯನ್ನು ಸಚಿವರು ನೀಡಿದ್ದಾರೆ. ಆದರೆ ನಮ್ಮ ಹೋರಾಟ ಜಿಲ್ಲೆಯಾಗುವವರೆಗೂ ನಿಲ್ಲುವುದಿಲ್ಲ ಎಂದಿದ್ದಾರೆ.
ನಾವು ಮತ್ತೊಂದು ಬಾರಿ ಜಿಲ್ಲೆ ಆಗಬೇಕು ಎಂದು ಸಚಿವರಿಗೆ ಮನವಿ ಕೊಡುತ್ತೇವೆ. ಗೋಕಾಕ ಜಿಲ್ಲೆ ಮಾಡದೆ ಇದ್ದಲ್ಲಿ ನ್ಯಾವಾದಿಗಳ ಸಂಘದಿಂದ ದೊಡ್ಡ ಹೋರಾಟ ಮಾಡಲಾಗುವದು ಎಂದು ಹೇಳಿದರು.