Breaking News

ಏಪ್ರಿಲ್‌ಗೆ ಜಿಬಿಎ, ಸ್ಥಳೀಯ ಸಂಸ್ಥೆ ಚುನಾವಣೆ ಸಿದ್ಧತೆಗೆ ಜಿಲ್ಲಾಧಿಕಾರಿಗಳಿಗೆ ಆಯೋಗ ಸೂಚನೆ

Spread the love

ಬೆಂಗಳೂರು:ಕಳೆದ ನಾಲ್ಕೈದು ವರ್ಷಗಳಿಂದ ಒಂದಿಲ್ಲೊಂದು ಕಾರಣಗಳಿಂದ ಪದೇ ಪದೇ ಮುಂದೂಡಲಾಗಿದ್ದ ಕರ್ನಾಟಕ ಸ್ಥಳೀಯ ಸಂಸ್ಥೆಗಳ ಚುನಾವಣೆಯು ಮುಂಬರುವ ಏಪ್ರಿಲ್‌‍-ಮೇ ತಿಂಗಳ ಮಧ್ಯಭಾಗದಲ್ಲಿ ನಡೆಯಲಿದೆ. ಚುನಾವಣೆಗೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕೆಂದು ಆಯೋಗವು ಆಯಾ ಜಿಲ್ಲಾಧಿಕಾರಿಗಳಿಗೆ ಈಗಾಗಲೇ ನಿರ್ದೇಶನ ನೀಡಿದೆ.

ಎಸ್‌‍ಎಸ್‌‍ಎಲ್‌ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಸೇರಿದಂತೆ ಎಲ್ಲಾ ಹಂತದ ಪರೀಕ್ಷೆಗಳು ಮಾರ್ಚ್‌- ಏಪ್ರಿಲ್‌ ತಿಂಗಳ ಅಂತ್ಯದೊಳಗೆ ಕೊನೆಗೊಳ್ಳುತ್ತವೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಏಪ್ರಿಲ್‌‍- ಮೇ ತಿಂಗಳ ಮಧ್ಯ ಭಾಗದಲ್ಲಿ ನಡೆಸಲು ಆಯೋಗ ಮುಂದಾಗಿದೆ.

ಬಹುನಿರೀಕ್ಷಿತ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಚುನಾವಣೆಯನ್ನು ಜೂನ್‌ 30ರ ಒಳಗೆ ನಡೆಸ ಬೇಕೆಂದು ಸುಪ್ರೀಂ ಕೋರ್ಟ್‌ ರಾಜ್ಯ ಸರ್ಕಾರಕ್ಕೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.

ಜಿಬಿಎ ಚುನಾವಣೆ ಜೊತೆಗೆ ಸ್ಥಳೀಯ ಸಂಸ್ಥೆಗಳಾದ ಗ್ರಾಮ ಪಂಚಾಯತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯತಿ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಮಹಾನಗರ ಪಾಲಿಕೆ ಸೇರಿದಂತೆ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಏಕಕಾಲಕ್ಕೆ ಒಂದೇ ಹಂತದಲ್ಲಿ ನಡೆಯಲಿವೆ.

ಮತ್ತೊಂದು ವಿಶೇಷವೆಂದರೆ ಈ ಬಾರಿಯ ಸ್ಥಳೀಯ ಸಂಸ್ಥೆಗಳ ಚುನಾವಣೆಯು (ವಿದ್ಯುನಾನ ಮತ ಯಂತ್ರ (ಇವಿಎಂ) ಬದಲಿಗೆ ಬ್ಯಾಲಟ್‌ ಪೇಪರ್‌ (ಮತಪತ್ರ)ನಲ್ಲಿ ನಡೆಯಲಿದೆ. ಸಾಮಾನ್ಯವಾಗಿ ಈವರೆಗೂ ಗ್ರಾಮ ಪಂಚಾಯತ್‌ ಚುನಾವಣೆಯಲ್ಲಿ ಮಾತ್ರ ಇವಿಎಂ ಬದಲಿಗೆ ಮತಪತ್ರದಲ್ಲಿ ಮತದಾನ ಮಾಡಲಾಗುತ್ತಿತ್ತು. ಉಳಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಮತದಾನವು ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆ ಮಾದರಿಯಲ್ಲಿ ಇವಿಎಂ ನಲ್ಲಿ ನಡೆಯುತ್ತಿತ್ತು. ಆದರೆ ಕಳೆದ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಮತಚೋರಿ ನಡೆದಿದೆ ಎಂದು ಕಾಂಗ್ರೆಸ್‌‍ ಸಂಶಯ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗ ಮತಪತ್ರದ ಮೂಲಕವೇ ಮತದಾನ ನಡೆಸಲು ಉದ್ದೇಶಿಸಿದೆ.

ರಾಜ್ಯದ 5,948 ಗ್ರಾ.ಪಂ.ಗಳ ಪೈಕಿ 5,698 ಗ್ರಾ.ಪಂ.ಗಳಿಗೆ 2020 ಡಿಸೆಂಬರ್‌ನಲ್ಲಿ ಚುನಾವಣೆ ಆಗಿತ್ತು. ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ 2021-22ರಲ್ಲಿ ನಡೆದಿದ್ದರಿಂದ 2026ರ ಫೆಬ್ರವರಿ ಎರಡನೇ ವಾರಕ್ಕೆ ಈ ಪಂಚಾಯಿತಿ ಚುನಾಯಿತ ಸದಸ್ಯರ ಅಧಿಕಾರಾವಧಿ ಮುಗಿಯಲಿದೆ. ಇದರೊಟ್ಟಿಗೆ 2026ರ ಮಾರ್ಚ್‌ಗೆ ಮುಗಿಯುವ 92 ಗ್ರಾ.ಪಂ.ಗಳನ್ನೂ ಸೇರಿಸಿ ಚುನಾವಣೆ ನಡೆಸಲು ಸರಕಾರ ತಯಾರಿ ನಡೆಸಿದೆ.

ಈಗಾಗಲೇ ರಾಜ್ಯದ 187 ನಗರ ಸ್ಥಳೀಯ ಸಂಸ್ಥೆಗಳ ಕೌನ್ಸಿಲ್‌ ಅವಧಿ ಮುಗಿದಿದೆ. 2021ರಿಂದಲೇ ರಾಜ್ಯದ 31 ಜಿ.ಪಂ. ಹಾಗೂ 240 ತಾ.ಪಂ.ಗಳಿಗೂ ಚುನಾಯಿತ ಪ್ರತಿನಿಧಿಗಳಿಲ್ಲ. ಈಗ 5,790 ಗ್ರಾ.ಪಂ.ಗಳನ್ನೂ ಆಡಳಿತಾಧಿಕಾರಿಗಳ ಮೇಲೆ ನಿರ್ವಹಿಸಿದರೆ (ಕೆಲ ಗ್ರಾ.ಪಂ.ಗಳಿಗೆ ನೇಮಿಸಲಾಗಿದೆ) ಸರ್ಕಾರ ಆಕ್ಷೇಪಕ್ಕೆ ಗುರಿಯಾಗುವ ಸಾಧ್ಯತೆಗಳಿವೆ.
ಬಹುಮುಖ್ಯವಾಗಿ ಜಿಲ್ಲಾ, ತಾಲ್ಲೂಕು ಪಂಚಾಯತಿ ಚುನಾವಣೆ ನಡೆಯಬೇಕಿತ್ತಾದರೂ ಮೀಸಲಾತಿ ಹಂಚಿಕೆ ವಿಳಂಬದಿಂದ ಸಾಧ್ಯವಾಗಿರಲಿಲ್ಲ. ಚುನಾವಣೆಗೆಗಾಗಿ ಕಾದುಕುಳಿತವರಿಗೂ ಭಾರೀ ನಿರಾಸೆಯಾಗಿತ್ತು. ಈಗಾಗಲೇ ರಾಜ್ಯದ ಬಹುತೇಕ ಸ್ಥಳೀಯ ಸಂಸ್ಥೆಗಳು ಜನಪ್ರತಿನಿಧಿಗಳಿಲ್ಲದೆ ನಡೆಯುತ್ತಿವೆ.

ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳು, 185 ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯಿತಿಗಳಿಗೆ ಸರಣಿಯಾಗಿ ಚುನಾವಣೆಗಳು ನಡೆಯುವ ಸಾಧ್ಯತೆ ಇದೆ. 2020-21ನೇ ಸಾಲಿನಿಂದ ಚುನಾವಣೆ ಬಾಕಿ ಉಳಿದಿದೆ. ಜಿ.ಪಂ. ಮತ್ತು ತಾ.ಪಂ.ಗಳ ಕ್ಷೇತ್ರ ಪುನರ್‌ವಿಂಗಡಣೆಯನ್ನು ಸರ್ಕಾರ ಒಪ್ಪಿದ್ದರೂ, ಮೀಸಲಾತಿಯನ್ನು ಅಂತಿಮಗೊಳಿಸಿ ಚುನಾವಣಾ ಆಯೋಗಕ್ಕೆ ನೀಡಿಲ್ಲ.

ಈ ವಿಚಾರ ನ್ಯಾಯಾಲಯದಲ್ಲಿದ್ದು, ಬಹುತೇಕ ಐದು ವರ್ಷಗಳ ಒಂದು ಅವಧಿಯನ್ನು ಜನಪ್ರತಿನಿಧಿಗಳಿಲ್ಲದೆ ಜಿ.ಪಂ ಮತ್ತು ತಾ.ಪಂಗಳು ಕಳೆದಿದೆ. ಐದು ಮಹಾನಗರ ಪಾಲಿಕೆಗಳಿಗೆ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ಸಿದ್ಧತೆ ನಡೆಸಿದೆ.

ಮಂಗಳೂರು, ಶಿವಮೊಗ್ಗ, ದಾವಣಗೆರೆ, ತುಮಕೂರು ಮತ್ತು ಮೈಸೂರು ಮಹಾನಗರ ಪಾಲಿಕೆಗಳಲ್ಲಿ ಮತದಾರರ ಪಟ್ಟಿ ಅಂತಿಮಗೊಂಡಿದ್ದು, ಸರ್ಕಾರ ಮೀಸಲಾತಿ ಪಟ್ಟಿ ನೀಡಿದರೆ ಅದರಂತೆ, ಇಲ್ಲದಿದ್ದರೆ ಹಳೆಯ ಮೀಸಲಾತಿ ಪಟ್ಟಿಯಂತೆ ಚುನಾವಣೆ ನಡೆಸಲಾಗುವುದು ಎಂದು ಇತ್ತೀಚೆಗೆ ರಾಜ್ಯ ಆಯೋಗ ಹೇಳಿರುವುದನ್ನು ಗಮನಿಸಬಹುದು.

185 ನಗರ ಸ್ಥಳೀಯ ಸಂಸ್ಥೆಗಳು ಜಿ.ಪಂ., ತಾ.ಪಂ.ಗಳ ಜೊತೆಗೆ, ಅವಧಿ ಮುಗಿಯುತ್ತಿರುವ 185 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವ ಉದ್ದೇಶವಿದೆ. ಈಗಾಗಲೇ, ಅವಧಿ ಮುಗಿದ ಹಿನ್ನೆಲೆ ಹಲವೆಡೆ ಆಡಳಿತಾಧಿಕಾರಿಗಳ ನೇಮಕ ಮಾಡಿ ಆಡಳಿತ ನಡೆಸಲಾಗುತ್ತಿದೆ. ಸಾವಿರಕ್ಕೂ ಹೆಚ್ಚು ಗ್ರಾಮ ಪಂಚಾಯತಿಗಳು ರಾಜ್ಯದ ಸುಮಾರು 6,022 ಗ್ರಾಮ ಪಂಚಾಯಿತಿಗಳ ಪೈಕಿ ಬಹಳಷ್ಟು ಸಂಸ್ಥೆಗಳ ಅವಧಿ ಜನವರಿಯಿಂದ ಫೆಬ್ರವರಿಯೊಳಗೆ ಮುಗಿಯುತ್ತಿದೆ. ಈ ವೇಳೆಗೆ ಚುನಾವಣಾ ಪ್ರಕ್ರಿಯೆ ಆರಂಭವಾಗಬೇಕಿತ್ತು. 2026 ರಲ್ಲಿ ಚುನಾವಣೆ ನಡೆಸದಿದ್ದರೆ ವಿಕೇಂದ್ರೀಕರಣ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡ ಅಪಕೀರ್ತಿ ತಟ್ಟಲಿದೆ.

ರಾಜಕೀಯ ಪಕ್ಷಗಳ ಚಿಹ್ನೆಗಳಿಲ್ಲದೆ ನಡೆಯುವ ಗ್ರಾಮ ಪಂಚಾಯಿತಿ ಚುನಾವಣೆಗಳ ಮೂಲಕ ನಾಡಿನ ಜನರ ಅಭಿಪ್ರಾಯವನ್ನು ಅರಿತು, ಉಳಿದ ಚುನಾವಣೆಗಳಿಗೆ ಸಿದ್ಧತೆ ನಡೆಸುವ ಚಿಂತನೆ ಸರ್ಕಾರದ ಮುಂದಿದೆ.

ಜಿಬಿಎ ಚುನಾವಣೆಗೆ ಈಗಾಗಲೇ ಸಿದ್ಧತೆ ಆರಂಭ :
ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ಪಾಲಿಕೆಗಳಿಗೆ ಸರ್ಕಾರ ಚುನಾವಣೆ ನಡೆಸಲು ಮುಂದಾಗಿದೆ. ಕಾಂಗ್ರೆಸ್‌‍ ಈಗಾಗಲೇ ಟಿಕೆಟ್‌ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಿದೆ. ಬಿಜೆಪಿ ಕೂಡ ಸದ್ದಿಲ್ಲದೆ ತಯಾರಿ ನಡೆಸುತ್ತಿದೆ. ಒಟ್ಟು 369 ವಾರ್ಡ್‌ಗಳನ್ನು ರಚಿಸಿದ್ದು, ಹಿಂದಿನ ಚುನಾವಣೆಗೆ ಹೋಲಿಸಿದರೆ ದುಪ್ಪಟ್ಟಾಗಿದೆ. ಬ್ಯಾಲಟ್‌ ಪೇಪರ್‌ ಬಳಕೆ ಅಗ್ನಿ ಪರೀಕ್ಷೆ ಸ್ಥಳೀಯ ಸಂಸ್ಥೆಗಳ ಚುನಾವಣೆಯು ಆಡಳಿತ ಮತ್ತು ಪ್ರತಿಪಕ್ಷಗಳಿಗೆ ಅಗ್ನಿಪರೀಕ್ಷೆಯಾಗಿ ಪರಿಣಮಿಸಲಿದೆ.

ಸರ್ಕಾರದ ಸಾಧನೆಗಳ ಮೇಲೆ ಆಡಳಿತಾರೂಢ ಕಾಂಗ್ರೆಸ್‌‍ ಮತದಾರರ ಹೋಲಿಕೆಗೆ ಮುಂದಾದರೆ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌‍ ಸರ್ಕಾರದ ವೈಫಲ್ಯಗಳನ್ನು ಮುಂದಿಟ್ಟುಕೊಂಡು ಜನತಾ ನ್ಯಾಯಾಲಯಕ್ಕೆ ತೆರಳಲಿದೆ. ಹಲವು ಗೊಂದಲಗಳ ನಡುವೆಯೇ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್‌‍ ಮೈತ್ರಿಕೂಟ ಮುಂದುವರೆಯಲಿದೆ.

ಸಂಭಾವ್ಯ ಚುನಾವಣೆಗಳು
ಒಟ್ಟು ತಾಲೂಕು ಪಂಚಾಯತಿ – 239 ತಾಲೂಕು – 3,671 ಕ್ಷೇತ್ರಗಳು
ಜಿಲ್ಲಾ ಪಂಚಾಯತಿ – 31 ಜಿಲ್ಲೆ – 1,130 ಕ್ಷೇತ್ರಗಳು
ಗ್ರಾಮ ಪಂಚಾಯತಿ – 6000- ಪಟ್ಟಣ ಪಂಚಾಯತಿ, ಪುರಸಭೆ, ನಗರ ಸಭೆ ಚುನಾವಣೆ (ನಗರ ಸ್ಥಳೀಯ ಸಂಸ್ಥೆ) – 185 ಕ್ಷೇತ್ರಗಳು
ಜಿಬಿಎ 5 ಪಾಲಿಕೆ ಚುನಾವಣೆ (ಗ್ರೇಟರ್‌ ಬೆಂಗಳೂರು ಪ್ರಾಧಿಕಾರ) – 5 ಪಾಲಿಕೆ – 369 ಒಟ್ಟು ವಾರ್ಡ್‌ಗಳು.
ಮಹಾ ನಗರ ಪಾಲಿಕೆ ಚುನಾವಣೆ – 5


Spread the love

About Laxminews 24x7

Check Also

ರೀಲ್ಸ್, ಫೇಸ್ಬುಕ್ ಪೋಸ್ಟ್​ಗಾಗಿ ಮಾಡಬಾರದು: ಪುನೀತ್ ಕೆರೆಹಳ್ಳಿಗೆ ಕೋರ್ಟ್ ಪಾಠ, ಕೇಸಿಗೆ ತಡೆ

Spread the loveಬೆಂಗಳೂರು: ಅಕ್ರಮ ಬಾಂಗ್ಲಾ ವಲಸಿಗರನ್ನು ಪ್ರಶ್ನಿಸಿದ್ದ ಹಿಂದೂ ಹೋರಾಟಗಾರ ಪುನೀತ್ ಕೆರೆಹಳ್ಳಿವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಹೈಕೋರ್ಟ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ