ಬೆಂಗಳೂರು: ಕೊರೊನಾ ನಿಯಂತ್ರಿಸಲು ಲಾಕ್‌ಡೌನ್ ಒಂದೇ ಪರಿಹಾರವಲ್ಲ, ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸುವ ಮೂಲಕ ಕೊರೊನಾ ನಿಯಂತ್ರಿಸಲು ಜನರು ಸಹಕಾರ ನೀಡಬೇಕೆಂದು ಮುಖ್ಯಮಂತ್ರಿ ಯಡಿಯೂರಪ್ಪ ಮನವಿ ಮಾಡಿದ್ದಾರೆ.
ರಾಜ್ಯವನ್ನು ಉದ್ದೇಶಿಸಿ ಮಾತನಾಡಿದ ಅವರು, ನಾಳೆಯಿಂದ ಬೆಂಗಳೂರಿನಲ್ಲಿ ಲಾಕ್‌ಡೌನ್ ಇರುವುದಿಲ್ಲ. ಜನರ ರಕ್ಷಣೆಯ ಜೊತೆ ಸರ್ಕಾರಕ್ಕೆ ಆರ್ಥಿಕ ಸಂಪನ್ಮೂಲ ಅಗತ್ಯವಿದೆ. ಹೀಗಾಗಿ ಬೆಂಗಳೂರು ಮಾತ್ರ ಅಲ್ಲ ರಾಜ್ಯದ ಎಲ್ಲೂ ಲಾಕ್‌ಡೌನ್ ಮಾಡುವುದಿಲ್ಲ. ಆದರೆ ಕಂಟೈನ್ಮೆಂಟ್ ವಲಯದಲ್ಲಿ ನಿಯಮ ಬಿಗಿ ಇರುತ್ತದೆ ಎಂದು ಸ್ಪಷ್ಟಪಡಿಸಿದರು.
ಎಲ್ಲೇ ಹೋದರೂ ಮಾಸ್ಕ್ ಧರಿಸುವ ಬಿಗಿ ನಿಲುವನ್ನು ತೆಗೆದುಕೊಳ್ಳಬೇಕು. ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಜೀವ ಉಳಿಸೋಣ ಎಂದು ವಿನಂತಿಸಿಕೊಂಡರು.
ಆರಂಭದಲ್ಲಿ ಕೊರೊನಾ ನಿಯಂತ್ರಣದಲ್ಲಿ ರಾಜ್ಯ ಮುಂಚೂಣಿಯಲ್ಲಿತ್ತು. ಆದರೆ ಲಾಕ್‌ಡೌನ್ ತೆರವಾದ ನಂತರ ಮಹಾರಾಷ್ಟ್ರ, ತಮಿಳುನಾಡು ಬೇರೆ ರಾಜ್ಯಗಳಿಂದ ಜನ ಬಂದ ಬಳಿಕ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಈಗ ನಿಯಂತ್ರಣ ಮಾಡಲು ಸರ್ಕಾರ ಸಾಕಷ್ಟು ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.
ಪೊಲೀಸರು ಬಹಳ ಕಷ್ಟಪಡುತ್ತಿದ್ದಾರೆ. ಮನೆಯಿಂದ ಹೊರಗಡೆ ಬಂದಾಗ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಮಾಸ್ಕ್ ಧರಿಸದೇ ಇದ್ದಲ್ಲಿ ಅವರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.