ಗದಗ: ಸರ್ಕಾರಿ ಪ್ರೌಢಶಾಲೆಯಲ್ಲಿ 6 ವರ್ಷದಿಂದ ಇಂಗ್ಲಿಷ್ ಶಿಕ್ಷಕರಿಲ್ಲ. ‘ಸರ್ ನಮ್ಮ ಶಾಲೆಗೆ ಇಂಗ್ಲಿಷ್ ಶಿಕ್ಷಕರನ್ನು ನಿಯೋಜನೆ ಮಾಡಿ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕಾಲು ಹಿಡಿದು ವಿದ್ಯಾರ್ಥಿಗಳು ಗೋಳಾಡಿದ ಘಟನೆ ಗದಗದಲ್ಲಿ ನಡೆದಿದೆ.
ಗದಗ ತಾಲೂಕಿನ ಕದಡಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ 6 ವರ್ಷದಿಂದ ಇಂಗ್ಲಿಷ್ ಶಿಕ್ಷಕರ ಕೊರತೆ ಇದೆ. ಹೀಗಾಗಿ ಇಂಗ್ಲಿಷ್ ಶಿಕ್ಷಕರ ನೇಮಕ ಮಾಡಿ ಎಂದು ಗದಗ ಬಿಇಒ ಎಂ.ಎ.ರಡ್ಡೇರ್‌ಗೆ ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ. ಇದೇ ವೇಳೆ ಬಿಇಒಗೆ ಮಹಿಳೆಯೊಬ್ಬರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ನೀವು ಸರ್ಕಾರದಿಂದ ಲಕ್ಷ ಲಕ್ಷ ಸಂಬಳವನ್ನು ತೆಗೆದುಕೊಳ್ಳುತ್ತೀರಿ. ನಿಮ್ಮ ಮಕ್ಕಳನ್ನು ಒಳ್ಳೆಯ ಖಾಸಗಿ ಶಾಲೆಗೆ ಸೇರಿಸಿ ಓದಿಸುತ್ತೀರಿ. ನಾವೇನು ಮಾಡುವುದು ಎಂದು ಬಿಇಒಗೆ ಮಹಿಳೆ ಪ್ರಶ್ನಿಸಿದ್ದಾರೆ. ಮಹಿಳೆ ಆಕ್ರೋಶ ಹೊರಹಾಕುತ್ತಿದ್ದಂತೆ ಬಿಇಒ ಗಪ್‌ಚುಪ್ ಆಗಿದ್ದಾರೆ. ಈ ಹಿಂದೆ ಇದ್ದ ಇಂಗ್ಲಿಷ್ ಶಿಕ್ಷಕಿ ಪಲ್ಲವಿ ಎಂ ಯಲಿಗಾರರನ್ನೇ ನೇಮಿಸುವಂತೆ ಆಗ್ರಹಿಸಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಗದಗ ಡಿಡಿಪಿಐ ಜಿ.ಎಂ.ಬಸವಲಿಂಗಪ್ಪಗೆ ಇದೇ ವಿಷಯವಾಗಿ ಮಕ್ಕಳು ಒತ್ತಾಯಿಸಿದ್ದಾರೆ.
ಡಿಡಿಪಿಐ ಮತ್ತು ಬಿಇಓಗೆ ಮಕ್ಕಳೆದುರಲ್ಲೇ ಪೋಷಕರು ತರಾಟೆಗೆ ತೆಗೆದುಕೊಂಡಿದ್ದಾರೆ. ಅಕ್ರಮವಾಗಿ ಇಂಗ್ಲಿಷ್ ಶಿಕ್ಷಕಿಯನ್ನ ಬೇರೆ ಜಿಲ್ಲೆಗೆ ನಿಯೋಜನೆ ಮಾಡಿದ್ದೀರಿ. ಅಧಿಕಾರಿಗಳು ಆರು ವರ್ಷದ ಹಿಂದೆ ಇದ್ದ ಇಂಗ್ಲಿಷ್ ಶಿಕ್ಷಕಿಯನ್ನು ನಿಯಮ ಉಲ್ಲಂಘಿಸಿ ಡೆಪ್ಟೇಷನ್ ಮೇಲೆ ಬೇರೆ ಶಾಲೆಗೆ ಕಳಿಹಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಆರು ವರ್ಷಗಳಿಂದ ಇಂಗ್ಲಿಷ್ ಶಿಕ್ಷಕರಿಲ್ಲದೇ ಹೈಸ್ಕೂಲ್ ವಿದ್ಯಾರ್ಥಿಗಳು ಗೋಳಾಡುತ್ತಿದ್ದಾರೆ. ಶಿಕ್ಷಣ ಇಲಾಖೆ ಅಧಿಕಾರಿಗಳ ಧೋರಣೆ ವಿರುದ್ಧ ವಿಧ್ಯಾರ್ಥಿಗಳು, ಪೋಷಕರು ಸಿಟ್ಟಿಗೆದ್ದಿದ್ದಾರೆ. ಈ ಶಾಲೆಯಲ್ಲಿ ಒಟ್ಟು ಏಳು ಜನ ಶಿಕ್ಷಕರು ಇದ್ರು. ಇಂಗ್ಲೀಷ್ ಶಿಕ್ಷಕರು ನಿಯೋಜನೆ ಮೇಲೆ ಹೋಗಿದ್ದಾರೆ. ಹಾಗೂ ಆರು ವರ್ಷಗಳಿಂದ ಅತಿಥಿ ಶಿಕ್ಷಕರೊಬ್ಬರು ಇಂಗ್ಲೀಷ್ ಪಾಠ ಮಾಡುತ್ತಿದ್ರು. ಅವ್ರು ಸರಿಯಾಗಿ ಬರ್ತಾಯಿರಲಿಲ್ಲ. ಹೀಗಾಗಿ ಮಕ್ಕಳು ಆರು ವರ್ಷ ಇಂಗ್ಲಿಷ್ ಶಿಕ್ಷಕರು ಇಲ್ಲದೇ ಪರದಾಡುತ್ತಿದ್ದಾರೆ ಎಂಬುವುದು ತಿಳಿದು ಬಂದಿದೆ.