ನವದೆಹಲಿ: ಕೆಟ್ಟ ಮಕ್ಕಳಿರಬಹುದು ಆದರೆ ಕೆಟ್ಟ ತಂದೆ-ತಾಯಿ ಇರಲಾರರು ಎಂಬ ಮಾತೊಂದಿದೆ. ಈ ಮಾತು ಸುಳ್ಳು ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ದುಡ್ಡಿಗಾಗಿ ಹೆತ್ತವರೇ ತಮ್ಮ ಮಗಳನ್ನು ವೇಶ್ಯಾವಾಟಿಕೆಗೆ ತಳ್ಳಿದ ನೀಚ ಕೃತ್ಯ ಬೆಳಕಿಗೆ ಬಂದಿದೆ. ಹಿಮಾಚಲ ಪ್ರದೇಶದಲ್ಲಿ ಈ ಪ್ರಕರಣ ನಡೆದಿದ್ದು, ಹಣಕ್ಕಾಗಿ ಅಪ್ಪ, ಅಮ್ಮ, ಅಣ್ಣ ಸೇರಿ ಯುವತಿಯನ್ನು ವೇಶ್ಯಾವಾಟಿಕೆಗೆ ದೂಡಿದ್ದಾರೆ. ತನಗೆ ಗೌರವದಿಂದ ಬದುಕಲು ಬಿಡಿ ಎಂದು ಬೇಡಿಕೊಂಡರೂ ಕೇಳದ ಅವರು ಆಕೆಗೆ ಹೊಡೆದು, ಈ ದಂಧೆಯಲ್ಲಿ ತೊಡಗುವಂತೆ ಮಾಡಿದ್ದಾರೆ.
ಕೆಲವು ಸಮಯವಾದ ಬಳಿಕ ಆ ಯುವತಿಗೆ ಅನಾರೋಗ್ಯ ಉಂಟಾಗಿದ್ದು, ಆಕೆಯಿಂದ ಇನ್ನು ತಮಗೆ ಉಪಯೋಗ ಇಲ್ಲವೆಂದು ತಿಳಿದ ಪೋಷಕರು ಆಕೆಗೆ ಚಿಕಿತ್ಸೆ ಕೂಡ ಕೊಡಿಸದೆ ದೂರದ ಸಂಬಂಧಿಯ ಮನೆಯಲ್ಲಿ ಬಿಟ್ಟು ಹೋಗಿದ್ದಾರೆ. ಬಳಿಕ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಆಕೆಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ.
20 ವರ್ಷದ ಯುವತಿ ತನ್ನ ಹೆತ್ತವರಿಂದ ತನಗೆ ಆಗಿರುವ ಅನ್ಯಾಯದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾಳೆ. ಆಸ್ಪತ್ರೆಯಲ್ಲೇ ಆಕೆಯ ಹೇಳಿಕೆಗಳನ್ನು ದಾಖಲಿಸಿಕೊಂಡಿರುವ ಪೊಲೀಸರು ಆಕೆಯ ಅಪ್ಪ-ಅಮ್ಮನ ವಿರುದ್ಧ ಕೇಸ್ ದಾಖಲಿಸಿಕೊಂಡಿದ್ದಾರೆ. ನನ್ನ ಅಪ್ಪ, ಅಮ್ಮ, ಅಣ್ಣ ನನ್ನನ್ನು ಲೈಂಗಿಕ ಕಾರ್ಯಕರ್ತೆಯಾಗುವಂತೆ ಒತ್ತಾಯಿಸಿದರು. ನನ್ನ ಇಬ್ಬರು ಅಕ್ಕಂದಿರು ಕೂಡ ಇದಕ್ಕೆ ಬೆಂಬಲ ನೀಡಿದ್ದರು. ನಾನು ಅತ್ತು, ಜಗಳವಾಡಿದರೂ ಕೇಳದೆ ವೇಶ್ಯಾವಾಟಿಕೆಗೆ ತಳ್ಳಿದರು. ಅವರಿಂದ ನನ್ನ ಜೀವನವೇ ಹಾಳಾಯಿತು ಎಂದು ಆಕೆ ದೂರು ನೀಡಿದ್ದಾಳೆ.
Laxmi News 24×7