ನವದೆಹಲಿ : ಕೊರೋನಾ ಸೋಂಕಿನಿಂದ ಉಂಟಾಗುವ ಸಾವು ತಡೆಯುವಲ್ಲಿ ಅಥವಾ ಸಾಮಾನ್ಯ ಸೋಂಕು ತೀವ್ರ ಪ್ರಮಾಣಕ್ಕೆ ಹೋಗುವುದನ್ನು ನಿಲ್ಲಿಸುವಲ್ಲಿ ಪ್ಲಾಸ್ಮಾ ಥೆರಪಿಯಿಂದ ವಿಶೇಷ ಪ್ರಯೋಜನವೇನೂ ಆಗುವುದಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ.
ದೇಶದ 39 ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಪ್ಲಾಸ್ಮಾ ಚಿಕಿತ್ಸೆಯ ಪ್ರಯೋಜನದ ಬಗ್ಗೆ ಏ.22ರಿಂದ ಜು.12ರವರೆಗೆ ಐಸಿಎಂಆರ್ ತಂಡ ಅಧ್ಯಯನ ನಡೆಸಿತ್ತು. ಆಸ್ಪತ್ರೆಗೆ ದಾಖಲಾದ 464 ಮಂದಿ ಸಾಮಾನ್ಯ ಪ್ರಮಾಣದ ಕೊರೋನಾ ಸೋಂಕಿತರನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಅವರಲ್ಲಿ 235 ಮಂದಿಗೆ ಪ್ಲಾಸ್ಮಾ ಚಿಕಿತ್ಸೆಯನ್ನೂ, 229 ಮಂದಿಗೆ ಸಾಮಾನ್ಯ ಚಿಕಿತ್ಸೆಯನ್ನೂ ನೀಡಿ, 28 ದಿನಗಳ ಕಾಲ ನಿಗಾ ವಹಿಸಲಾಗಿತ್ತು. ಈ ಅಧ್ಯಯನದಲ್ಲಿ ಪ್ಲಾಸ್ಮಾ ಚಿಕಿತ್ಸೆ ಪಡೆದ ರೋಗಿಗಳು ಹಾಗೂ ಸಾಮಾನ್ಯ ಚಿಕಿತ್ಸೆ ಪಡೆದ ರೋಗಿಗಳ ನಡುವೆ ಸಾವಿನ ಪ್ರಮಾಣ ಮತ್ತು ಸೋಂಕು ತೀವ್ರಗೊಳ್ಳುವ ಪ್ರಮಾಣದಲ್ಲಿ ವ್ಯತ್ಯಾಸವೇನೂ ಕಾಣಿಸಿಲ್ಲ.
ಇದರೊಂದಿಗೆ, ತೀವ್ರತರದ ಕೊರೋನಾ ಸೋಂಕಿತರಿಗೆ ಪ್ಲಾಸ್ಮಾ ಚಿಕಿತ್ಸೆ ವರದಾನವಾಗಬಹುದು ಎಂಬ ನಂಬಿಕೆ ಹುಸಿಯಾಗಿದೆ. ಕೊರೋನಾದಿಂದ ಗುಣಮುಖರಾದವರು ಪ್ಲಾಸ್ಮಾ ದಾನ ಮಾಡಿ ಎಂದು ಸರ್ಕಾರ ನೀಡುತ್ತಿದ್ದ ಕರೆಯೂ ವ್ಯರ್ಥವಾಗುವ ಸಾಧ್ಯತೆ ಗೋಚರಿಸಿದೆ. ಅಲ್ಲದೆ, ಕೊರೋನಾಗೆ ನೀಡುವ ಪ್ಲಾಸ್ಮಾ ಚಿಕಿತ್ಸೆಯ ಭವಿಷ್ಯವೇ ತೂಗುಯ್ಯಾಲೆಯಲ್ಲಿ ಸಿಲುಕಿದೆ ಎಂದು ತಿಳಿದುಬಂದಿದೆ.
*ಹೆಚ್ಚಿನ ಸುದ್ದಿಗಾಗಿ ಲಕ್ಷ್ಮಿ ನ್ಯೂಸ್ ಚಾನಲ್ ಅನ್ನ subscribe ಹಾಗೂ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಲಕ್ಷ್ಮಿ ನ್ಯೂಸ್ ವೆಬ್ ಸೈಟ್ ಫಾಲೋ ಮಾಡಿ*??