ನವದೆಹಲಿ: ಕೋವಿಡ್-19 ಸಾಂಕ್ರಾಮಿಕದ ಪರಿಣಾಮವಾಗಿ, ಸಾಲ ಮರುಪಾವತಿಯಲ್ಲಿ ತೊಂದರೆ ಎದುರಿಸುತ್ತಿರುವವರಿಗೆ ಸಾಲ ಮರುಹೊಂದಾಣಿಕೆಯ ಸೌಲಭ್ಯವನ್ನು ಸೆಪ್ಟೆಂಬರ್ 15ಕ್ಕೆ ಮೊದಲು ನೀಡುವಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬ್ಯಾಂಕುಗಳು ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ (ಎನ್‌ಬಿಎಫ್‌ಸಿ) ಸೂಚಿಸಿದ್ದಾರೆ.
ನಿರ್ಮಲಾ ಅವರು ಬ್ಯಾಂಕುಗಳು ಹಾಗೂ ಎನ್‌ಬಿಎಫ್‌ಸಿ ಪ್ರತಿನಿಧಿಗಳ ಜೊತೆ ಗುರುವಾರ ಸಭೆ ನಡೆಸಿದರು. ಆಡಳಿತ ಮಂಡಳಿಯಿಂದ ಅನುಮೋದನೆ ಪಡೆದಿರುವ ಸಾಲ ಮರುಹೊಂದಾಣಿಕೆಯ ಸೌಲಭ್ಯವನ್ನು ತಕ್ಷಣ ಕಲ್ಪಿಸಬೇಕು ಎಂದು ಸೂಚಿಸಿದರು. ಸಾಲದ ಕಂತುಗಳ ಮರುಪಾವತಿಗೆ ನೀಡಿದ್ದ ವಿನಾಯಿತಿಯು ಆಗಸ್ಟ್ 31ರಂದು ಕೊನೆಗೊಂಡಿದೆ.
ಸಾಲ ಮರುಹೊಂದಾಣಿಕೆಗೆ ಅರ್ಹರಾಗಿರುವ ಸಾಲಗಾರರನ್ನು ಗುರುತಿಸಿ, ಅವರನ್ನು ಸಂಪರ್ಕಿಸುವ ಕೆಲಸ ಆಗಬೇಕು.
ಉದ್ಯಮಗಳ ಪುನಶ್ಚೇತನದ ದೃಷ್ಟಿಯಿಂದ, ಸಾಲ ಮರುಹೊಂದಾಣಿಕೆ ಯೋಜನೆಯನ್ನು ತ್ವರಿತವಾಗಿ ಅನುಷ್ಠಾನಕ್ಕೆ ತರಬೇಕು ಎಂದೂ ಅವರು ಸೂಚಿಸಿದ್ದಾರೆ ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ. ಮರುಹೊಂದಾಣಿಕೆ ಯೋಜನೆಯನ್ನು ಜಾರಿಗೆ ತಂದ ನಂತರ, ಮಾಧ್ಯಮಗಳ ಮೂಲಕ ಅದರ ಬಗ್ಗೆ ನಿರಂತರವಾಗಿ ಮಾಹಿತಿ ಒದಗಿಸಬೇಕು ಎಂದೂ ಸೂಚಿಸಲಾಗಿದೆ.
ತಾವು ಈಗಾಗಲೇ ಸಾಲ ಮರುಹೊಂದಾಣಿಕೆ ಯೋಜನೆಯನ್ನು ಸಿದ್ಧಪಡಿಸಿದ್ದು, ಮರುಹೊಂದಾಣಿಕೆಗೆ ಅರ್ಹರಾಗಿರುವವರನ್ನು ಸಂಪರ್ಕಿಸುವ ಕೆಲಸ ನಡೆದಿದೆ ಎಂದು ಬ್ಯಾಂಕ್ ಪ್ರತಿನಿಧಿಗಳು ತಿಳಿಸಿದರು.