ಬೆಳಗಾವಿ : ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ‘ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ’ ಎಂದು ಸರ್ವಾನುಮತದ ನಿರ್ಣಯ ಅಂಗೀಕರಿಸುವಂತೆ ಆಗ್ರಹಿಸಿ ನಗರದಲ್ಲಿ ಗುರುವಾರ ಕರ್ನಾಟಕ ರಕ್ಷಣಾ ವೇದಿಕೆಯ ಶಿವರಾಮೇಗೌಡ ಬಣದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಚನ್ನಮ್ಮ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು, ಮಹಾನಗರ ಪಾಲಿಕೆಯಲ್ಲಿ ಈ ಹಿಂದೆ ಮಹಾರಾಷ್ಟ್ರ ಪರ ನಿರ್ಣಯ ಮಂಡಿಸಿರುವುದನ್ನು ಖಂಡಿಸಿದರು. ಪಾಲಿಕೆಯಲ್ಲಿ ಈಗ ಕನ್ನಡಿಗರೇ ಮಹಾಪೌರ ಮತ್ತು ಉಪಮೇಯರ್ ಆಗಿರುವುದರಿಂದ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ನಿರ್ಣಯ ಮಂಡಿಸಬೇಕು ಎಂದು ಆಗ್ರಹಿಸಿ, ಕೆಲಹೊತ್ತು ಪ್ರತಿಭಟಿಸಿದರು. ಕೊನೆಗೆ 20ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು, ನಂತರ ಬಿಡುಗಡೆಗೊಳಿಸಿದರು.
ವಿಜಯ ಮೋರೆ ಮಹಾಪೌರರಾಗಿದ್ದಾಗ ಬೆಳಗಾವಿ,ಕಾರವಾರ,ನಿಪ್ಪಾಣಿ, ಬೀದರ, ಬಾಲ್ಕಿ ಮತ್ತಿತರೆ ಪ್ರದೇಶ ಮಹಾರಾಷ್ಟ್ರಕ್ಕೆ ಸೇರಬೇಕೆಂದು ನಿರ್ಣಯ ಕೈಗೊಂಡಿದ್ದರು. ಇದೇ ನಿರ್ಣಯವನ್ನು ಮಹಾರಾಷ್ಟ್ರ ಸರ್ಕಾರ ಸುಪ್ರೀಂ ಕೋರ್ಟ್ ಗಡಿ ವ್ಯಾಜ್ಯಕ್ಕೆ ಪೂರಕ ದಾಖಲೆಯಾಗಿ ಬಳಸಿಕೊಂಡಿದೆ. ಇದು ಕರ್ನಾಟಕದ ಹಿತಾಸಕ್ತಿಗೆ ಧಕ್ಕೆ ತರುವಂತಾಗಿದೆ. ಈಗ ಪಾಲಿಕೆಯಲ್ಲಿ ಕನ್ನಡಿಗರ ಆಡಳಿತವಿದೆ. ಹೀಗಾಗಿ, ‘ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ, ಗಡಿ ವಿವಾದಕ್ಕೆ ಮಹಾಜನ ವರಿದಿ’ ಅಂತಿಮ ಎಂದು ಸರ್ವಾನುಮತದ ನಿರ್ಣಯ ಮಂಡಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಅಧ್ಯಕ್ಷ ವಾಜೀದ ಹಿರೆಕುಡಿ, ಜಗನ್ನಾಥ ಬಾಮಣೆ, ಇರ್ಫಾನ ತಾಬೊಲಿ, ಅಣ್ಣಾಸಾಬ ತೇಲಸಂಗ, ನಾಗೇಶ ಕೊಪ್ಪದ ಇತರರಿದ್ದರು.
Laxmi News 24×7