ನವದೆಹಲಿ: ಕೇಂದ್ರ ಸರ್ಕಾರ ಬೀದಿ ಬದಿಯ ವ್ಯಾಪಾರಿಗಳಿಗೆ ರಿಲೀಫ್ ನೀಡಿದಂತೆ ಸಣ್ಣ ವ್ಯಾಪಾರಿಗಳಿಗೆ ಸಹಾಯಹಸ್ತ ಚಾಚಿದೆ.
ಮುದ್ರಾ ಶಿಶು ಯೋಜನೆಯ ಅಡಿಯಲ್ಲಿ ಗರಿಷ್ಟ 50 ಸಾವಿರ ರೂ. ಸಾಲ ನೀಡಲಾಗುತ್ತಿದ್ದು, ಈ ಯೋಜನೆಯ ಅಡಿಯಲ್ಲಿ ಸಾಲ ಪಡೆದವರಿಗೆ 12 ಅವಧಿಗೆ ಶೇ.2 ರಷ್ಟು ಬಡ್ಡಿಯನ್ನು ಸರ್ಕಾರವೇ ಪಾವತಿಸಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈಗಾಗಲೇ ಈ ಸಾಲಕ್ಕೆ ಅನುಮತಿ ನೀಡಿದೆ. ಪ್ರಧಾನಿ ಮೋದಿ ಪ್ರಕಟಿಸಿದ 20 ಲಕ್ಷ ಕೋಟಿ ರೂ. ವಿಶೇಷ ಆರ್ಥಿಕ ಪ್ಯಾಕೇಜಿನಲ್ಲಿ ಈ ಯೋಜನೆಗೆ ಒಟ್ಟು 1,500 ಕೋಟಿ ರೂ. ಹಣವನ್ನು ಮೀಸಲಿಡಲಾಗಿದೆ.
ಏನಿದು ಮುದ್ರಾ ಸಾಲ?
ಸಣ್ಣ ಉದ್ಯಮಿಗಳಿಗೆ ಸಹಾಯ ಮಾಡಲು ಮುದ್ರಾ ಬ್ಯಾಂಕ್ ಸ್ಥಾಪನೆಯಾಗಿದ್ದು, ಈ ಯೋಜನೆಯ ಅಡಿ ಶಿಶು ಸಾಲ(50 ಸಾವಿರ ರೂ.), ಕಿಶೋರ್ ಸಾಲ(50 ಸಾವಿರ ರೂ. ನಿಂದ 5 ಲಕ್ಷ ರೂ.), ತರುಣ್ ಸಾಲ(5 ಲಕ್ಷ ರೂ. ನಿಂದ 10 ಲಕ್ಷ ರೂ.) ನೀಡಲಾಗುತ್ತದೆ.
ಮುದ್ರಾ ವ್ಯಾಪ್ತಿಯಲ್ಲಿ ಯಾರೆಲ್ಲ ಬರುತ್ತಾರೆ?
3 ಚಕ್ರ ವಾಹನ, ಕಾರು, ಟ್ಯಾಕ್ಸಿ, ಆಟೋ ರಿಕ್ಷಾ ಓಡಿಸುವವರು, ಜೆರಾಕ್ಸ್ ಅಂಗಡಿ, ಮೆಡಿಕಲ್ ಸ್ಟೋರ್, ಸಲೂನ್, ಬ್ಯೂಟಿಪಾರ್ಲರ್ ಗಳು, ವ್ಯಾಯಾಮಶಾಲೆ, ಅಂಗಡಿಗಳು, ಹೊಲಿಗೆ ಅಂಗಡಿಗಳು, ಡ್ರೈ ಕ್ಲೀನಿಂಗ್, ಸೈಕಲ್ ಮತ್ತು ಮೋಟರ್ ರಿಪೇರಿ ಮಾಡುವ ಅಂಗಡಿ ಸೇರಿದಂತೆ ಸಣ್ಣ ಪ್ರಮಾಣದ ಉದ್ಯೋಗ ನಡೆಸುವವರು ಸೇರುತ್ತಾರೆ.