Breaking News

ದಕ್ಷಿಣ ಪಿನಾಕಿನಿ ಜಲವಿವಾದ – ನ್ಯಾಯಮಂಡಳಿ ಸ್ಥಾಪನೆಗೆ ಸುಪ್ರೀಂ ಆದೇಶ

Spread the love

ನವದೆಹಲಿ: ಕರ್ನಾಟಕ  ಹಾಗೂ ತಮಿಳುನಾಡು  ನಡುವಿನ ಪೆನ್ನಾರ್ (ದಕ್ಷಿಣ ಪಿನಾಕಿನಿ) ನದಿ ನೀರು ಹಂಚಿಕೆ ವಿವಾದಗಳನ್ನು ಬಗೆಹರಿಸಲು ನ್ಯಾಯಮಂಡಳಿ  ರಚಿಸುವಂತೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ಪ್ರಕಟಿಸಿದೆ.

ತಮಿಳುನಾಡು ಸರ್ಕಾರ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿಕ್ರಮ್‌ನಾಥ್ ಹಾಗೂ ಎನ್.ವಿ.ಅಂಜಾರಿಯಾ ಪೀಠವು ವಿವಾದ ಇತ್ಯರ್ಥಪಡಿಸಲು ನ್ಯಾಯಮಂಡಳಿ ರಚಿಸುವುದು ಸೂಕ್ತ. ಆದೇಶ ಪ್ರಕಟವಾದ ಒಂದು ತಿಂಗಳೊಳಗೆ ಜಲ ವಿವಾದ ನ್ಯಾಯಮಂಡಳಿಯನ್ನು ರಚಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ನಿರ್ದೇಶನ ನೀಡಿದೆ.

ಈ ಹಿಂದೆ ನಡೆದ ಅರ್ಜಿ ವಿಚಾರಣೆ ವೇಳೆ ಪೀಠ ಉಭಯ ರಾಜ್ಯಗಳು ತಮ್ಮ ವಾದಗಳನ್ನು ನ್ಯಾಯಮಂಡಳಿಯಲ್ಲಿ ಮಂಡಿಸುವುದು ಉತ್ತಮ ಎಂದು ಅಭಿಪ್ರಾಯ ವ್ಯಕ್ತಪಡಿಸಿತ್ತು.

ದಕ್ಷಿಣ ಪಿನಾಕಿನಿ  ನದಿಯ ಕಣಿವೆಯಲ್ಲಿ ಕರ್ನಾಟಕ ಸರ್ಕಾರವು ಮಾರ್ಕಂಡೇಯ ನದಿಗೆ ಅಡ್ಡಲಾಗಿ ಅಣೆಕಟ್ಟೆ ನಿರ್ಮಿಸಿದೆ. ಬೆಂಗಳೂರಿನ ಎಲೆ ಮಲ್ಲಪ್ಪಚೆಟ್ಟಿ ಕೆರೆಯಿಂದ ಹೊಸಕೋಟೆಯವರೆಗೆ ನೀರು ಹರಿಸುವ ಕಾಮಗಾರಿ, ಬ್ಯಾಲಹಳ್ಳಿ ಗ್ರಾಮದ ಹತ್ತಿರ ಪೆನ್ನಾರ್ ನದಿಯಿಂದ ನೀರು ಹರಿಸುವ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ.

ಕಾಮಗಾರಿ ಕೈಗೆತ್ತಿಕೊಂಡ ಬೆನ್ನಲ್ಲೇ ತಮಿಳುನಾಡು ಸರ್ಕಾರ 2018ರಲ್ಲಿ ಕರ್ನಾಟಕ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಮೂಲ ದಾವೆ ಹೂಡಿತ್ತು. ನದಿಯ ಮೇಲ್ದಂಡೆ ಭಾಗದಲ್ಲಿ ಕರ್ನಾಟಕ ಸರ್ಕಾರ ಕೈಗೊಂಡ ನಿರ್ಧಾರಗಳಿಂದಾಗಿ ಕೆಳದಂಡೆ ಭಾಗದಲ್ಲಿರುವ ತಮಿಳುನಾಡಿಗೆ ಹರಿಯುವ ನೀರಿನ ಪ್ರಮಾಣದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ತಮಿಳುನಾಡು ವಾದಿಸಿತ್ತು.

ಸಚಿವರುಗಳು ಸಭೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಕೇಂದ್ರ ಸರ್ಕಾರ ಈ ಹಿಂದೆ ಸೂಚಿಸಿತ್ತಾದರೂ ಪ್ರಕರಣ ನಿರ್ಧರಿಸಲು ನ್ಯಾಯಮಂಡಳಿ ರಚನೆಯಾಗಬೇಕು ಎಂದು ತಮಿಳುನಾಡು ಒತ್ತಾಯಿಸಿತ್ತು.

ಮಾತುಕತೆಗಳ ಮೂಲಕ ವಿವಾದ ಪರಿಹರಿಸಲು ವಿಳಂಬ ಆಗಿರುವುದಕ್ಕೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರವನ್ನು ನವೆಂಬರ್ 2022ರಲ್ಲಿ ತರಾಟೆಗೆ ತೆಗೆದುಕೊಂಡಿತ್ತು. ಇದಕ್ಕೂ ಮುನ್ನ  ಜನವರಿ 2019ರಲ್ಲಿ ಈ ಸಂಕೀರ್ಣ ಸಮಸ್ಯೆಯನ್ನು ಪರಿಹರಿಸಲು ನ್ಯಾಯಮಂಡಳಿ ರಚಿಸುವಂತೆ ತಮಿಳುನಾಡು ಸರ್ಕಾರ ಮನವಿ ಸಲ್ಲಿಸಲು ನ್ಯಾಯಾಲಯ ಅನುಮತಿ ನೀಡಿತ್ತು. ನಂತರ ಮೇ ತಿಂಗಳಲ್ಲಿ ಈ ಉದ್ದೇಶಕ್ಕಾಗಿ ಸುಪ್ರೀಂಕೋರ್ಟ್ ಮತ್ತೊಮ್ಮೆ ಗಡುವು ವಿಸ್ತರಿಸಿತ್ತು.

ಪೆನ್ನಾರ್‌ ಜಲವಿವಾದ ನ್ಯಾಯಮಂಡಳಿ ರಚನೆಗೆ ಸಂಬಂಧಿಸಿದ ಪ್ರಸ್ತಾವನೆಗೆ ಸಚಿವ ಸಂಪುಟ ಕಾರ್ಯದರ್ಶಿ ಮೂಲಕ ಅನುಮೋದನೆಗಾಗಿ ಕಳುಹಿಸಲಾಗಿದ್ದರೂ ಕೇಂದ್ರ ಸಚಿವ ಸಂಪುಟ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು 2023ರಲ್ಲಿ ಕೇಂದ್ರ ಜಲಶಕ್ತಿ ಸಚಿವಾಲಯ ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು.

ಕರ್ನಾಟಕ ಮತ್ತು ತಮಿಳುನಾಡು ನಡುವೆ ಹಲವು ದಶಕಗಳಿಂದ ಜೀವಂತ ಇರುವ ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಫೆಬ್ರವರಿ 2018ರಲ್ಲಿ ಐತಿಹಾಸಿಕಾ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್‌ ಜಲಸಂಪತ್ತುಗಳು ರಾಷ್ಟ್ರದ ಆಸ್ತಿಯಾಗಿದ್ದು ಯಾವುದೇ ಒಂದು ರಾಜ್ಯ ಅವುಗಳ ಮೇಲೆ ಏಕಸ್ವಾಮ್ಯ ಸಾಧಿಸುವಂತಿಲ್ಲ ಎಂದಿತ್ತು.

ಕರ್ನಾಟಕದ ಜಲಾನಯನ ಪ್ರದೇಶದಲ್ಲಿ ಒಟ್ಟು 11.77 ಟಿಎಂಸಿ ನೀರಿನಲ್ಲಿ 9.77 ಟಿಎಂಸಿ ನೀರನ್ನು ಬಳಸಲು ಯೋಜಿಸಲಾಗಿದೆ. ಇದರಲ್ಲಿ 2 ಟಿಎಂಸಿ ಮತ್ತು ಹೆಚ್ಚುವರಿ ನೀರು ತಮಿಳುನಾಡಿಗೆ ಉಳಿದಿದೆ. ಇದು ತಮಿಳುನಾಡಿನ ಅವಶ್ಯಕತೆಗಳನ್ನು ಪೂರೈಸಲು ಸಾಕಾಗುತ್ತದೆ ಎಂದು ಕರ್ನಾಟಕ  ಸರ್ಕಾರ ಸ್ಪಷ್ಟಪಡಿಸಿತ್ತು.


Spread the love

About Laxminews 24x7

Check Also

ಬಾಗಲಕೋಟೆ: ನಿಯಂತ್ರಣ ತಪ್ಪಿ ಎಥಿನಾಲ್ ಲಾರಿ ಪಲ್ಟಿ; ಅಧಿಕಾರಿಗಳ ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ!

Spread the loveಬಾಗಲಕೋಟೆ: ನಿಯಂತ್ರಣ ತಪ್ಪಿ ಎಥಿನಾಲ್ ಲಾರಿ ಪಲ್ಟಿ; ಅಧಿಕಾರಿಗಳ ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ! ಬಾಗಲಕೋಟೆ ಜಿಲ್ಲೆಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ