ನವದೆಹಲಿ: ಬಾಲಿವುಡ್ ಐಷಾರಾಮಿ ಡ್ರಗ್ಸ್ ಕೇಸ್ನಲ್ಲಿ ಜೈಲು ಪಾಲಾಗಿದ್ದ ಆರ್ಯನ್ ಖಾನ್ಗೆ ಕೊನೆಗೂ ಬಿಡುಗಡೆಯ ಭಾಗ್ಯ ಸಿಕ್ಕಿದೆ. ನಿನ್ನೆ ಬಾಂಬೆ ಹೈಕೋರ್ಟ್ನ ಏಕ ಸದಸ್ಯ ಪೀಠ ಜಾಮೀನು ನೀಡುವ ಮೂಲಕ, ಆರ್ಯನ್ ಖಾನ್ನ 22 ದಿನಗಳ ಜೈಲು ವಾಸದಿಂದ ಮುಕ್ತಗೊಳಿಸಿದೆ. ಆದ್ರೆ ರಿಲೀಸ್ ಭಾಗ್ಯ ಮಾತ್ರ ಇವತ್ತೂ ಸಿಗೋದು ಡೌಟ್.
ಡ್ರಗ್ಸ್ ಕೇಸ್ನಲ್ಲಿ ಅಂದರ್ ಆಗಿದ್ದ ಆರ್ಯನ್ಗೆ ಬೇಲ್
23 ದಿನಗಳ ಬಳಿಕ ಜೈಲು ಹಕ್ಕಿಗೆ ಬಿಡುಗಡೆಯ ಭಾಗ್ಯ
ಬಾಲಿವುಡ್ ಐಷಾರಾಮಿ ಡ್ರಗ್ ಕೇಸ್ನಲ್ಲಿ ತಗ್ಲಾಕೊಂಡಿದ್ದ ಶಾರೂಖ್ ಖಾನ್ ಸುಪುತ್ರ ಆರ್ಯನ್ ಖಾನ್ಗೆ ಕೊನೆಗೂ ಜಾಮೀನು ಸಿಕ್ಕಿದೆ. ಸತತ 23 ದಿನಗಳ ಕಾಲ ಕಸ್ಟಡಿಯಲ್ಲಿ ಕಾಲ ಕಳೆದಿದ್ದ ಆರ್ಯನ್ಗೆ ಬಾಂಬೆ ಹೈಕೋರ್ಟ್ ಬೇಲ್ ನೀಡುವ ಮೂಲಕ ರಿಲೀಫ್ ನೀಡಿದೆ. ಆರ್ಯನ್ ಜೊತೆಗೆ ಅಂದರ್ ಆಗಿದ್ದ ಮುನ್ಮುನ್ ಧಮೇಚಾ, ಅರ್ಬಾಜ್ ಮರ್ಚೆಂಟ್ಗೂ ಸಹ ಜಾಮೀನು ನೀಡಿದೆ.
ಆರ್ಯನ್ ಬಿಡುಗಡೆಗೆ ಹಬ್ಬ ಮಾಡಿದ ಅಭಿಮಾನಿಗಳು
ವಕೀಲರ ಜೊತೆ ಒಗ್ಗಟ್ಟು ಪ್ರದರ್ಶಿಸಿದ ಶಾರೂಖ್ ಖಾನ್
ಆರ್ಯನ್ ಖಾನ್ಗೆ ಬಾಂಬೆ ಹೈಕೋರ್ಟ್ ಜಾಮೀನು ಮಂಜೂರು ಮಾಡ್ತಿದ್ದಂತೆ, ಆರ್ಯನ್ ಖಾನ್ ಅಭಿಮಾನಿಗಳು ಸಿಹಿ ಹಂಚಿ, ಪಟಾಕಿ ಸಿಡಿಸುವ ಮೂಲಕ ಸಂಭ್ರಮಾಚರಣೆ ಮಾಡಿದ್ದಾರೆ. ಆರ್ಯನ್ ಖಾನ್ ತಂಗಿ ಸುಹಾನ ಖಾನ್ ತಮ್ಮ ಬಾಲ್ಯದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಶಾರೂಖ್ ಅಭಿಮಾನಿಯಾಗಿರುವ ಅಜ್ಜಿಯೊಬ್ಬರು ಆರ್ಯನ್ ಖಾನ್ ಬಿಡುಗಡೆಯನ್ನು ಸಿಹಿ ಹಂಚುವ ಮೂಲಕ ಸಂಭ್ರಮಿಸಿದ್ದಾರೆ. ಇತ್ತ ಬೇಲ್ ಸಿಗ್ತಿದ್ದಂತೆ ಶಾರೂಖ್ ಕೂಡ ಆರ್ಯನ್ ಪರ ವಕೀಲ ಅಮಿತ್ ದೇಸಾಯಿ, ವಕೀಲ ಸತೀಶ್ ಮಾನ್ಶಿಂಧೆ ಜೊತೆಗೆ ಶಾರುಖ್ ಖಾನ್ ಪೋಸ್ ನೀಡುವ ಮೂಲಕ ಒಗ್ಗಟ್ಟು ಪ್ರದರ್ಶಿಸಿದ್ದಾರೆ.
ನಾಳೆ ಆರ್ಯನ್ ಬಿಡುಗಡೆ ಸಾಧ್ಯತೆ
ನಿನ್ನೆ ಬಾಂಬೆ ಹೈಕೋರ್ಟ್ ಆರ್ಯನ್ ಖಾನ್ಗೆ ಜಾಮೀನು ಮಂಜೂರು ಮಾಡಿದೆ.. ಬಾಂಬೆ ಹೈಕೋರ್ಟ್ನ ಜಾಮೀನು ಆದೇಶದ ಪ್ರತಿ ಇಂದು ಅರ್ಥರ್ ಜೈಲಾಧಿಕಾರಿಗಳಿಗೆ ರವಾನೆ ಆಗಲಿದೆ. ಇನ್ನೂ ಎನ್ಸಿಬಿ ಅಧಿಕಾರಿಗಳಿಗೂ ಕೂಡ ಜಾಮೀನು ಆದೇಶ ಪ್ರತಿ ಕೈ ಸೇರಲಿದೆ. ಇಂದೇ ಜಾಮೀನಿನ ಎಲ್ಲಾ ಕಾನೂನು ಪ್ರಕ್ರಿಯೆ ಸಂಪೂರ್ಣಗೊಳ್ಳಲಿದ್ದು, ಸಂಜೆಯೊಳಗೆ ಆರ್ಯನ್ ಖಾನ್ ವಕೀಲರಿಂದ ಜಾಮೀನು ಪ್ರತಿ ಜೈಲಾಧಿಕಾರಿಗಳ ಕೈ ಸೇರಲಿದೆ. ಇನ್ನೂ ಎಲ್ಲಾ ಅಂದುಕೊಂಡಂತೆ ಆದ್ರೆ ನಾಳೆ ಮಧ್ಯಾಹ್ನದ ಒಳಗೆ ಆರ್ಯನ್ ಖಾನ್ ಗ್ರ್ಯಾಂಡಾಗಿ ರಿಲೀಸ್ ಆಗಲಿದ್ದಾರೆ.
ಪ್ರಸ್ತುತ ಎನ್ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ತನ್ನದೇ ಇಲಾಖೆಯಲ್ಲಿ ಆಂತರಿಕ ತನಿಖೆಯನ್ನು ಎದುರಿಸುತ್ತಿದ್ದಾರೆ. ಜೊತೆಗೆ ಲಂಚ ಮತ್ತು ಸುಲಿಗೆ ಆರೋಪದ ಮೇಲೆ ಮುಂಬೈ ಪೊಲೀಸರಿಂದ ಆಂತರಿಕ ತನಿಖೆಯನ್ನು ಎದುರಿಸುತ್ತಿರುವ ವಾಂಖೆಡೆ ವಿರುದ್ಧ ನವಾಬ್ ಮಲ್ಲಿಕ್ ಹೊಸ ಬಾಂಬ್ ಸಿಡಿಸಿರುವುದು ಈ ತನಿಖೆಯಲ್ಲಿ ಸಂಚಲನ ಸೃಷ್ಟಿಸಿದೆ.
ಸಮೀರ್ ವಾಂಖೆಡೆಗೆ ಮಲಿಕ್ ಟಾಂಗ್
ಆರ್ಯನ್ ಖಾನ್ ಜಾಮೀನು ಸಿಕ್ಕಿದ ಬೆನ್ನಲ್ಲೇ ಎನ್ಸಿಬಿ ಅಧಿಕಾರಿ ಸಮೀರ್ಗೆ ಟಾಂಗ್ ಕೊಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಮೀರ್ ವಾಂಖೆಡೆಗೆ ಮಲಿಕ್ ಟಾಂಗ್ ಕೊಟ್ಟಿದ್ದು, ಪಿಕ್ಚರ್ ಅಭಿ ಬಾಕಿ ಹೈ ದೋಸ್ತ್ ಎಂದು ಟ್ವಿಟರ್ನಲ್ಲಿ ಸಮೀರ್ ವಾಖೆಂಡೆಗೆ ಎನ್ಸಿಪಿ ಸಚಿವ ನವಾಬ್ ಮಲಿಕ್ ಕುಟುಕಿದ್ದಾರೆ. ಸಮೀರ್ ಮುಂಬೈ ಪೊಲೀಸರು ತನ್ನನ್ನು ಬಂಧಿಸದಂತೆ ತಡೆಯಾಜ್ಞೆ ತಂದಿದ್ದಾರೆ. ತಡೆಯಾಜ್ಞೆ ತರುವ ಮೂಲಕ ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದಾರೆ. ಅವರು ನಿಜವಾಗಲೂ ತಪ್ಪಿತಸ್ಥರು ಎಂಬುದಕ್ಕೆ ಇದಕ್ಕಿಂತ ಸಾಕ್ಷಿ ಬೇಕೆ, ತಾವು ತಪ್ಪು ಮಾಡಿರುವ ಕಾರಣ ಕಾನೂನು ರಕ್ಷಣೆ ಕೋರುತ್ತಿದ್ದಾರೆ. ಸಮೀರ್ನ ಇನ್ನಷ್ಟು ಸತ್ಯಗಳು ಹೊರಬರಲಿವೆ ಅಂತ ನವಾಬ್ ಮಲ್ಲಿಕ್ ಕಿಡಿ ಕಾರಿದ್ದಾರೆ.
23 ದಿನಗಳ ಬಳಿಕ ಆರ್ಯನ್ ಖಾನ್ ಅರ್ಥರ್ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ. ಇನ್ನೂ ಈ ಐಷಾರಾಮಿ ಡ್ರಗ್ಸ್ ಪ್ರಕರಣದ ತನಿಖೆ ಆರ್ಯನ್ ಬಿಡುಗಡೆಯ ಜೊತೆಗೆ ಹಳ್ಳ ಹಿಡಿಯುತ್ತೋ ಅಥವಾ ಮುಂದೆ ಮತ್ತಷ್ಟು ತಿರುವು ಪಡೆದುಕೊಳ್ಳುವ ಮೂಲಕ ನಶೆಕೋರರಿಗೆ ಶಾಕ್ ಕೊಡುತ್ತೋ ಕಾದು ನೋಡಬೇಕಿದೆ.