ಗೆಲ್ಲಲೇಬೇಕಾದ ಪಂದ್ಯದಲ್ಲಿ ಟೀಂ ಇಂಡಿಯಾ ಬಾಂಗ್ಲಾದೇಶದ ವಿರುದ್ಧ 5 ರನ್‌ಗಳ ರೋಚಕ ಜಯ ಸಾಧಿಸಿದೆ. ತಂಡದ ಸೆಮಿಫೈನಲ್ ಹಾದಿ ಸುಲಭವಾಗಿದ್ದು, ಮುಂದಿನ ಎದುರಾಳಿ ಜಿಂಬಾಬ್ವೆ ವಿರುದ್ಧ ಗೆಲುವು ಸಾಧಿಸಬೇಕಾಗಿದೆ.
ಕಳೆದ ಮೂರು ಪಂದ್ಯಗಳಲ್ಲಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದ ಕೆಎಲ್ ರಾಹುಲ್ ಇಂದಿನ ಪಂದ್ಯದಲ್ಲಿ ಮಿಂಚು ಹರಿಸಿದರು.
ಸತತವಾಗಿ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿದ್ದ ಉಪನಾಯಕ ಬಾಂಗ್ಲಾ ವಿರುದ್ಧ ಫಾರ್ಮ್‌ಗೆ ಮರಳಿದರು. ನಾಯಕ ರೋಹಿತ್ ಶರ್ಮಾ ಔಟಾದ ನಂತರ ವಿರಾಟ್ ಕೊಹ್ಲಿ ಜೊತೆಗೂಡಿ ತಂಡವನ್ನು ಆರಂಭಿಕ ಆಘಾತದಿಂದ ಕಾಪಾಡಿದರು.
IPL 2023 : ಮಯಾಂಕ್ ಅಗರ್ವಾಲ್ ಅಲ್ಲ ಈತ ಪಂಜಾಬ್ ಕಿಂಗ್ಸ್ ತಂಡದ ನೂತನ ನಾಯಕ
32 ಎಸೆತಗಳಲ್ಲಿ 3 ಬೌಂಡರಿ 4 ಭರ್ಜರಿ ಸಹಿತ 50 ರನ್ ಗಳಿಸುವ ಮೂಲಕ ತಮ್ಮ ಫಾರ್ಮ್ ಮರಳಿಪಡೆದರು. ಈ ಮೂಲಕ ಕೋಚ್ ರಾಹುಲ್ ದ್ರಾವಿಡ್, ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್, ನಾಯಕ ರೋಹಿತ್ ಶರ್ಮಾ ಅವರ ಮೇಲಿಟ್ಟ ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು.
ರಾಹುಲ್ ಔಟಾದ ನಂತರ ವಿರಾಟ್ ಕೊಹ್ಲಿ ಅಜೇಯ 64 ರನ್ ಮತ್ತು ಸೂರ್ಯಕುಮಾರ್ ಯಾದವ್ 30 ರನ್ ಮೂಲಕ ಭಾರತ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 184 ರನ್ ಕಲೆಹಾಕಿತು.
ಲಿಟ್ಟನ್ ದಾಸ್ ಅಬ್ಬರದ ಬ್ಯಾಟಿಂಗ್
185 ರನ್‌ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ಬಾಂಗ್ಲಾದೇಶ ಸುಲಭವಾಗು ಸೋಲುತ್ತದೆ ಎಂದೇ ಭಾವಿಸಲಾಗಿತ್ತು. ಆದರೆ, ಬಾಂಗ್ಲಾದೇಶದ ಆರಂಭಿಕ ಆಟಗಾರ ಲಿಟ್ಟನ್ ದಾಸ್ ಟೀಂ ಇಂಡಿಯಾ ಬೌಲರ್ ಗಳ ವಿರುದ್ಧ ಆರ್ಭಟಿಸಿದರು. ಪವರ್ ಪ್ಲೇನಲ್ಲಿ ಬೌಂಡರಿ, ಸಿಕ್ಸರ್ ಸಿಡಿಸುವ ಮೂಲಕ ಭಾರತಕ್ಕೆ ಆಘಾತ ನೀಡಿದರು.
21 ಎಸೆತಗಳಲ್ಲಿ ಅರ್ಧಶತಕ ಸಿಡಿಸುವ ಮೂಲಕ ಬಾಂಗ್ಲಾ ತಂಡಕ್ಕೆ ಗೆಲುವಿನ ಆಸೆ ಮೂಡಿಸಿದರು. 7 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 66 ರನ್ ಗಳಿಸಿದ್ದಾಗ ಮಳೆ ಪಂದ್ಯಕ್ಕೆ ಅಡ್ಡಿಯಾಯಿತು. ಕೆಲ ಹೊತ್ತಿನ ಬಳಿಕ ಮಳೆ ನಿಂತ ಮೇಲೆ ಪಂದ್ಯ ಆರಂಭವಾಯಿತು. ಪಂದ್ಯವನ್ನು 16 ಓವರ್ ಗಳಿಗೆ ಸೀಮಿತಗೊಳಿಸಲಾಯಿತು. ಬಾಂಗ್ಲಾದೇಶ ಗೆಲುವಿಗೆ 151 ರನ್ ಗಳಿಸಬೇಕಿತ್ತು. 7 ಓವರ್ ಗಳಲ್ಲಿ 66 ರನ್ ಗಳಿಸಿದ್ದ ಬಾಂಗ್ಲಾದೇಶಕ್ಕೆ ಇನ್ನು 9 ಓವರ್ ಗಳಲ್ಲಿ 85 ರನ್ ಗಳಿಸಬೇಕಿತ್ತು.
ಪಂದ್ಯದ ದಿಕ್ಕನ್ನೇ ಬದಲಿಸಿದ ಕನ್ನಡಿಗ
ಮಳೆಯ ನಂತರವೂ ಲಿಟ್ಟನ್ ದಾಸ್ ತಮ್ಮ ಆಟವನ್ನು ಮುಂದುವರೆಸಲು ಉತ್ಸುಕರಾಗಿದ್ದರು. 27 ಎಸೆತಗಳಲ್ಲಿ 60 ರನ್ ಗಳಿಸಿ ಭಾರತ ತಂಡದಿಂದ ಪಂದ್ಯವನ್ನು ಕಸಿದುಕೊಳ್ಳುವ ವಿಶ್ವಾಸದಲ್ಲಿದ್ದರು. ಆದರೆ, ಕೆಎಲ್ ರಾಹುಲ್ ಮಿಂಚಿನ ರನೌಟ್ ಮೂಲಕ ಲಿಟ್ಟನ್ ದಾಸ್‌ಗೆ ಡಗೌಟ್ ದಾರಿ ತೋರಿಸಿದರು. ಈ ರನೌಟ್ ಮೂಲಕ ಪಂದ್ಯದ ದಿಕ್ಕೇ ಬದಲಾಯಿತು.
ಲಿಟ್ಟನ್ ದಾಸ್ ಔಟಾದ ಬಳಿಕ ಭಾರತದ ಬೌಲರ್ ಗಳು ಅದ್ಭುತ ಬೌಲಿಂಗ್ ಪ್ರದರ್ಶಿಸಿದರು. ಫಿಲ್ಡಿಂಗ್‌ನಲ್ಲಿ ಮಿಂಚಿದ ಟೀಂ ಇಂಡಿಯಾ ಪ್ರಮುಖ ಕ್ಯಾಚ್‌ಗಳನ್ನು ಪಡೆಯುವ ಬಾಂಗ್ಲಾದೇಶವನ್ನು ಕಟ್ಟಿಹಾಕಿದರು. ಅಂತಿಮವಾಗಿ ಭಾರತ 5 ರನ್‌ಗಳ ಜಯ ಸಾಧಿಸುವಲ್ಲಿ ಯಶಸ್ವಿಯಾಯಿತು.
ನಾನು ಇಂದು ನೆಮ್ಮದಿಯಾಗಿ ಮಲಗುತ್ತೇನೆ
ಟಿ20 ವಿಶ್ವಕಪ್ ಆರಂಭವಾದಾಗಿನಿಂದಲೂ ತಮ್ಮ ಕಳಪೆ ಫಾರ್ಮ್‌ಗಾಗಿ ಟೀಕೆಗಳಿಗೆ ಗುರಿಯಾಗಿದ್ದ ರಾಹುಲ್ ಇಂದು ಉತ್ತರ ನೀಡಿದ್ದಾರೆ. ಅದು ಬ್ಯಾಟ್ ಮತ್ತು ಮಿಂಚಿನ ಫೀಲ್ಡಿಂಗ್ ಮೂಲಕ. ಇಂದಿನ ಪಂದ್ಯದ ಗೆಲುವಿನಲ್ಲಿ ಆತನ ಕೊಡುಗೆ ಮರೆಯುವಂತದ್ದಲ್ಲ.
ಪಂದ್ಯದ ಬಳಿಕ ಮಾತನಾಡಿದ ಕೆಎಲ್ ರಾಹುಲ್, ಕಳಪೆ ಫಾರ್ಮ್‌ನಲ್ಲಿದ್ದರೂ ನನ್ನ ಮೇಲೆ ನಂಬಿಕೆಯಿಟ್ಟು ಬೆಂಬಲಿಸಿದ ಕೋಚ್ ರಾಹುಲ್ ದ್ರಾವಿಡ್, ನಾಯಕ ರೋಹಿತ್ ಶರ್ಮಾಗೆ ಧನ್ಯವಾದ ತಿಳಿಸಿದರು. ಹಲವು ದಿನಗಳ ಬಳಿಕ ಇಂದು ನೆಮ್ಮದಿಯಾಗಿ ನಿದ್ರೆ ಮಾಡುತ್ತೇನೆ ಎಂದು ಹೇಳಿದರು.