ಬೆಳಗಾವಿ: ಕ್ಷೇತ್ರವಾರು ಕಾಂಗ್ರೆಸ್ ನಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ. ಅವರವರ ಕ್ಷೇತ್ರದ ವಿಚಾರ ಬಂದಾಗ ಅಲ್ಲಿನ ನಾಯಕರೇ ಸುಪ್ರೀಂ ಅಂತಾ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
ಕಾಂಗ್ರೆಸ್ ನಲ್ಲಿ ಮೂರು ಗುಂಪುಗಳಿವೆ ಎಂದು ಮಾಧ್ಯಮದವರ ಪ್ರಶ್ನೆಗೆ ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ. ಎಲ್ಲರು ಒಂದೇ. ಚಿಕ್ಕೋಡಿ ಭಾಗಕ್ಕೆ ಪ್ರಕಾಶ ಹುಕ್ಕೇರಿ ಅವರು ಬಾಸ್, ಬೇರೆ ಬೇರೆ ವಿಷಯಗಳಿಗೆ ಮನಸ್ಥಾಪವಿರಬಹುದು ಆದ್ರೆ ಪಕ್ಷದಲ್ಲಿ ಭಿನ್ನಾಭಿಪ್ರಾಯವಿಲ್ಲ. ಬೈಲಹೊಂಗಲಕ್ಕೆ ಮಹಾಂತೇಶ, ಬೆಳಗಾವಿ ಗ್ರಾಮೀಣಕ್ಕೆ ಹೆಬ್ಬಾಳ್ಕರ್, ಬೆಳಗಾವಿ ಉತ್ತರಕ್ಕೆ ಫೀರೋಜ್ ಸೇಠ್ ಹೀಗೆ ಅವರವರ ಕ್ಷೇತ್ರಕ್ಕೆ ಅವರೇ ಸುಪ್ರೀಂ ಎಂದು ಹೇಳಿದರು.
ಕ್ಷೇತ್ರ ವಿಚಾರ ಬಂದಾಗ ಅಲ್ಲಿನ ನಾಯಕರೇ ಸುಪ್ರೀಂ. ಅಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ. ಜಿಲ್ಲೆ ವಿಚಾರಕ್ಕೆ ಬಂದಾಗ ಪೈಪೋಟಿ ಇರತ್ತೆ ಬೆಂಗಳೂರಿನಿಂದ ದಿಲ್ಲಿಯವರೆಗೂ ನೆಚ್ಚಿನ ನಾಯಕರಿರುತ್ತಾರೆ, ಚೈನ್ ಸಿಸ್ಟಮ್ ಇರತ್ತೆ ಅದು ಬೇರೆ. ಪಕ್ಷ ಅಂತಾ ಬಂದಾಗ ನಾವೇಲ್ಲರು ಒಂದೇ ಎಂದು ಹೇಳಿದರು.
ರಾಮ ಮಂದಿರಕ್ಕೆ ದೇಣಿಗೆ ನೀಡಲು ಕಾಂಗ್ರೆಸ್ ನಾಯಕರು ನಾಟಕ ಮಾಡುತ್ತಿದ್ದಾರೆ ಎಂಬ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆಗೆ ಪ್ರತಿಕ್ರಿಯಿಸಿ, ರಾಮ ಮಂದಿರ ಕೇವಲ ಬಿಜೆಪಿಯರವ ಆಸ್ತಿಯಲ್ಲ . ಅದು ದೇಶದ ಆಸ್ತಿ. ಕಾಂಗ್ರೆಸ್ ಹಾಗೂ ಜೆಡಿಎಸ್ ಹೀಗೆ ಎಲ್ಲರೂ ರಾಮ ಮಂದಿರಕ್ಕೆ ದೇಣಿಗೆ ನೀಡಿದ್ದಾರೆ ಎಂದು ತಿರುಗೇಟು ನೀಡಿದರು.
ಬಹಳಷ್ಟು ಮಾಧ್ಯಮಗಳ ಆಡಳಿತ ಪಕ್ಷದ ತಪ್ಪು ಹುಡುಕುವುದನ್ನು ಬಿಟ್ಟು ವಿರೋಧ ಪಕ್ಷದ ಮೇಲೆ ಗೂಬೆ ಕೂರಿಸುತ್ತಿವೆ. ಎಲ್ಲ ಕ್ಷೇತ್ರದಲ್ಲಿಯೂ ಧರ್ಮ, ದುಡ್ಡು, ಜಾತಿ ತಾಂಡವಾಡುತ್ತಿದೆ. ಪ್ರಾಮಾಣಿಕತೆ ಗುರಿತಿಸುವುದು ಕಷ್ಟಕರವಾಗಿದೆ. ವಿರೋಧ ಪಕ್ಷ ಮಾತ್ರ ಹೊಣೆಗಾರಿಕೆ ಎನ್ನುವಂತೆ ಬಿಂಬಿಸಲಾಗುತ್ತಿದೆ. ಎಲ್ಲರ ಎಲ್ಲ ಜವಾಬ್ದಾರಿ ಎಷ್ಟಿದೆ ಎನ್ನುದುವನ್ನು ಮಾಧ್ಯಮಗಳು ಅರಿಯಬೇಕು ಇತ್ತೀಚಿನ ಮಾಧ್ಯಮಗಳ ನಡೆದೆ ಕಳವಳ ವ್ಯಕ್ತಪಡಿಸಿದರು.
ಮೀಸಲಾತಿ ನಿಜವಾಗಿಯೂ ಯಾವ ಸಮುದಾಯಕ್ಕೆ ಅವಶ್ಯಕತೆ ಇದೆಯೋ ಅವರಿಗೆ ನೀಡಬೇಕು. ಇದರಲ್ಲಿ ಸರ್ಕಾರ ಇಟ್ಟಕ್ಕಿಗೆ ಸಿಲುಕಿಕೊಳ್ಳುವ ಪ್ರಶ್ನೆಯೇ ಇಲ್ಲ. ಮೀಸಲಾತಿ ಕೇಳುವ ಹಕ್ಕು ಎಲ್ಲಿರಿಗೂ ಇದೆ. ಕಾನೂನಿನಲ್ಲಿ ಏನು ಅವಕಾಶವಿದೆ ಅದನ್ನು ಮಾಡಬೇಕು ಎಂದ ಅವರು, ಕಳೆದ ಬಾರಿಗಿಂತಲೂ ಈ ಬಾರಿ ತಾಪಂ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಹೆಚ್ಚು ಸ್ಥಾನ ಗೆಲ್ಲುವ ನಿರೀಕ್ಷೆ ಇದೆ. ಕೊನೆಗೆ ಜನರ ತೀರ್ಪು ಅಂತಿಮ ಎಂದರು.