ಬಾಗಲಕೋಟೆ, ಸೋಮವಾರ: ಮುಖ್ಯಮಂತ್ರಿ ಅಲ್ಲದೆ ಯಾರೇ ಬಂದರೂ ಉಪಚುನಾವಣೆಯಲ್ಲಿ ಬಾಗಲಕೋಟೆ ಮತ್ತು ದಾವಣಗೆರೆ ಎರಡೂ ಕ್ಷೇತ್ರದಲ್ಲಿ ಬಿಜೆಪಿ ಬಹು ಅಂತರದಲ್ಲಿ ಗೆಲ್ಲಲಿದೆ. ಕಾಂಗ್ರೆಸ್ ವೋಟ್ ಬ್ಯಾಂಕ್ ಕುತಂತ್ರ ಅರ್ಥಮಾಡಿಕೊಂಡ ಮತದಾರರು ತಕ್ಕಪಾಠ ಕಲಿಸಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ ಹೇಳಿದರು.
ನಗರದ ದೀಪಮ್ ಕಾಲೋನಿಯ ಸತ್ಯನಾರಾಯಣ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ವಾರ್ಡ್ ನಂ. 1 ಮತ್ತು 3ರಲ್ಲಿ ವೀರಣ್ಣ ಚರಂತಿಮಠ ಅವರ ಪರವಾಗಿ ಮನೆ ಮನೆಗಳಿಗೆ ತೆರಳಿ ಮತಯಾಚನೆ ಮಾಡಿ ಮಾತನಾಡಿದ ಅವರು ಉಪಚುನಾವಣೆಯ ಎರಡೂ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರು ಉತ್ಸಾಹದಿಂದ ಕೆಲಸ ಮಾಡುತ್ತಿದ್ದು ಬಾಗಲಕೋಟೆ ಮತಕ್ಷೇತ್ರ ರಣರಂಗವಾಗಿ ಬದಲಾಗಿದೆ. ಮತದಾರರು ಕಾಂಗ್ರೆಸ್ ದುರಾಡಳಿತಕ್ಕೆ ಸಂಪೂರ್ಣವಾಗಿ ಬೇಸತ್ತಿದ್ದು ಇದನ್ನು ಅರ್ಥೈಸಿಕೊಂಡ ಮುಖ್ಯಮಂತ್ರಿಗಳು ಸೋಲುವ ಆತಂಕದಿಂದ ಹಳ್ಳಿಗಳಲ್ಲೂ ವಾಸ್ತವ ಹೂಡಲು ಹೊರಟಿದ್ದಾರೆ. ತಮ್ಮ ಸ್ಥಾನವನ್ನೂ ಮರೆತು ಅಲ್ಪಸಂಖ್ಯಾತರ ಓಲೈಕೆ ಮಾಡಲು ಹೊರಟ ಇವರ ಯಾವುದೇ ಕುತಂತ್ರ ಬಿಜೆಪಿಯ ಮೇಲೆ ಪರಿಣಾಮ ಬೀರುವುದಿಲ್ಲ ನಮ್ಮ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಳೆದ ಮೂರು ವರ್ಷಗಳ ಕಾಂಗ್ರೆಸ್ ಆಡಳಿತದಲ್ಲಿ ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಅಪಮಾನ ಮತ್ತು ಸುಳ್ಳುಕೇಸ್ ದಾಖಲು ಪ್ರಕರಣಗಳು ಹೆಚ್ಚಾಗಿವೆ. ಬಾಗಲಕೋಟೆ ಸೇರಿದಂತೆ ವಿವಿಧೆಡೆ ಹಿಂದೂ ಮೆರವಣಿಗೆಗಳ ಮೇಲೆ ಕಲ್ಲು ತೂರಾಟಗಳು ನಡೆಯುತ್ತಿವೆ.
ದೇಶ ದ್ರೋಹಿಗಳಿಗೆ ರಕ್ಷಣೆ ಕೊಡುತ್ತಿದ್ದಾರೆ. ದಲಿತರ ಮೇಲೆ ಹಲ್ಲೆಗಳು ನಡೆಯುತ್ತಿದ್ದರೂ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಉದ್ಯೋಗ ಭರವಸೆ ನೀಡಿ ಒಂದು ಹುದ್ದೆಯನ್ನು ಭರ್ತಿ ಮಾಡದೇ ಪ್ರತಿಭಟನೆ ಮಾಡುವ ಉದ್ಯೋಗ ಆಕಾಂಕ್ಷೆಗಳ ಮೇಲೆ ಲಾಟಿ ಪ್ರಹಾರ ಮಾಡಿಸಿದ್ದಾರೆ. ಸರಕಾರದ ಇಂತಹ ಸಾಲು ಸಾಲು ವೈಪಲ್ಯತೆಗಳೇ ಬಿಜೆಪಿಯನ್ನು ಗೆಲ್ಲಿಸುತ್ತವೆ ಎಂದರು.
ಸಂಸದ ಗೋವಿಂದ ಕಾರಜೋಳ ಅವರು ಮಾತನಾಡಿ ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆ ಮೊದಲೇ ಸೋಲು ಖಚಿತವಾಗಿದ್ದು ಅತಂತ್ರ ಸ್ಥಿತಿ ತಲುಪಿದೆ. ಬಾಗಲಕೋಟೆಯಲ್ಲಿ ವೀರಣ್ಣ ಚರಂತಿಮಠರ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಚಾರದ ಮುಂದೆ ಮುಖ್ಯಮಂತ್ರಿಗಳ ಪ್ರಚಾರ ಕೆಲಸ ಮಾಡುವುದಿಲ್ಲ. ಅವರ ಯಾವ ಕುತಂತ್ರವು ಕಾರ್ಯತತ್ಪರ್ಯಕ್ಕೆ ಬಾರದ ಕಾರಣದಿಂದ ವಾಸ್ತವ ಹೂಡಲು ಮುಂದಾಗಿದ್ದಾರೆ ಎಂದರು.
ವಿಧಾನ ಪರಿಷತ್ ಸದಸ್ಯ ಪಿ.ಎಚ್ ಪೂಜಾರ ಮಾತನಾಡಿ ಬಾಗಲಕೋಟೆ ಸಮಗ್ರ ಅಭಿವೃದ್ಧಿ ಚರಂತಿಮಠರಿಂದ ಮಾತ್ರ ಸಾಧ್ಯ. ಮುಳುಗಡೆಯಂತಹ ಗಂಭೀರ ಪರಿಸ್ಥಿತಿಯಲ್ಲೂ ಜನಸಾಮಾನ್ಯರಿಗೆ ತೊಂದರೆಯಾಗದಂತೆ ಕಾರ್ಯನಿರ್ವಹಿಸಿದ್ದಾರೆ. ಈ ಭಾರಿ ಉಪಚುನಾವಣೆಯಲ್ಲಿ ಮತ್ತೊಮ್ಮೆ ಬೆಂಬಲಿಸಿ ಅವಕಾಶ ನೀಡಬೇಕು ಎಂದರು.
ಮತಯಾಚನೆಯಲ್ಲಿ ಎಂದಿನಂತೆ ಬೀದಿಯುದ್ದಕ್ಕೂ ರಂಗೋಲಿಗಳು ಅದ್ಧೂರಿ ಆಹ್ವಾನ ಮಾಡುತ್ತಿದ್ದವು. ರಾಜ್ಯಾಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ ಮತ್ತು ವೀರಣ್ಣ ಚರಂತಿಮಠ ಅವರಿಗೆ ಮನೆ ಮನೆಗಳಲ್ಲೂ ಹೂಮಾಲೆ ಶಾಲು ಹೊದಿಸಿ, ಸಿಹಿ ತಿನ್ನಿಸಿ ಸತ್ಕರಿಸಿದರು. ರಸ್ತೆಗಳಲ್ಲಿ ಹೂಮಳೆಗೈದು ಪಟಾಕಿ ಸಿಡಿಸಿ ಬೆಂಬಲ ಸೂಚಿಸಿದರು.
ಮತಯಾಚನೆಯಲ್ಲಿ ಜಮಖಂಡಿ ಶಾಸಕರಾದ ಜಗದೀಶ್ ಗುಡಗುಂಟಿ, ಬಾದಾಮಿ ಮಾಜಿ ಶಾಸಕ ಎಂ.ಕೆ ಪಟ್ಟಣಶೆಟ್ಟಿ, ಜೆಡಿಎಸ್ ಜಿಲ್ಲಾಧ್ಯಕ್ಷ ಹಣಮಂತ ಮಾವಿಮರದ, ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ್, ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ, ಜಿಲ್ಲಾ ಪ್ರದಾನ ಕಾರ್ಯದರ್ಶಿ ರಾಜು ನಾಯಕ, ಸರಸ್ವತಿ ಕುರಬರ,ಶೀವಲೀಲಾ ಪಟ್ಟಣಶೆಟ್ಟಿ ಕಿರಣ ಕೋರಿ, ಮಲ್ಲು ಕಾಂಭಳೆ, ವಿಶ್ವನಾಥ ವೖಜಾಪುರ, ಸೇರಿದಂತೆ ಬಿಜೆಪಿ ಜೆಡಿಎಸ್ ನಾಯಕರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
Laxmi News 24×7