ಬೆಂಗಳೂರು (ಡಿ.6) : ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ದಿ ನಿಗಮದಿಂದ ಸುಮಾರು .18 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ರಾಜ್ಯ ಆಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ದಕ್ಷಿಣ ಅಗ್ನಿ ಶಾಮಕ ಠಾಣೆ ನೂತನ ಕಟ್ಟಡ ಮತ್ತು ತುರ್ತು ಸೇವೆಗಳ ನಿರ್ವಹಣಾ ಕೇಂದ್ರವನ್ನು ಸೋಮವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಉದ್ಘಾಟಿಸಿದರು.
ನಗರದ ರೆಸಿಡೆನ್ಸಿ ರಸ್ತೆಯಲ್ಲಿ ದಕ್ಷಿಣ ಅಗ್ನಿಶಾಮಕ ಠಾಣೆಯು ಸ್ವಾತಂತ್ರ್ಯ ಪೂರ್ವ(1942)ದಲ್ಲಿ ಪ್ರಾರಂಭಗೊಂಡಿದ್ದು, ಅಂದಿನಿಂದ ಇಂದಿನ ವರೆಗೆ ಹಳೇಯ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ಹೀಗಾಗಿ ಹಳೇ ಕಟ್ಟಡ ತೆರವುಗೊಳಿಸಿ ಅತ್ಯಾಧುನಿಕ ಅಗ್ನಿಶಾಮಕ ಕಟ್ಟಡವನ್ನು ನಿರ್ಮಿಸಲಾಗಿದೆ. ಇದರಲ್ಲಿ 6 ಬೇ ಮತ್ತು ತಳ ಮಹಡಿ, ನೆಲ ಮಹಡಿ ಹಾಗೂ ನಾಲ್ಕು ಮೇಲಂತಸ್ತು ಹೊಂದಿದೆ. ಇದರಲ್ಲಿ ವ್ಯಾಯಾಮ ಶಾಲೆ, ಪ್ರವೇಶ ಕೊಠಡಿ, ತರಬೇತಿ ಕೊಠಡಿ, ವರ್ಕ್ ಸ್ಟೇಷನ್, ಪ್ಯಾಂಟ್ರಿ, ವಿಶ್ರಾಂತಿ ಕೊಠಡಿ, ಕಾನ್ಫೆರೆನ್ಸ್ ಹಾಲ್, ಅಧ್ಯಯನ ಕೇಂದ್ರ, 90 ಮೀಟರ್ ಎತ್ತರದ ಏರಿಯಲ್ ಲ್ಯಾಡರ್ ಪ್ಲಾಟ್‌ಫಾಮ್‌ರ್ ವಾಹನ ಹಾಗೂ ಅಗ್ನಿಶಮನ ವಾಹನಗಳನ್ನು ನಿಲ್ಲಿಸಲು ಪ್ರತ್ಯೇಕ ಬೇಗಳನ್ನು ನಿರ್ಮಿಸಲಾಗಿದೆ.
ಈ ಕಟ್ಟಡದಲ್ಲಿ ಅತ್ಯಾಧುನಿಕ ತುರ್ತು ನಿರ್ವಹಣಾ ಕೇಂದ್ರವನ್ನೂ ಪ್ರಾರಂಭಿಸಿದ್ದು, ಇದರಲ್ಲಿ 75 ಆಸನ ಸಾಮರ್ಥ್ಯದ 15 ಮೀಟರ್ ಉದ್ದ ಹಾಗೂ 3 ಮೀಟರ್ ಅಗಲದ ವಿಡಿಯೋ ವಾಲ್ ಇದೆ. ರಾಜ್ಯದ ಎಲ್ಲಾ ಜಿಲ್ಲಾ ಅಗ್ನಿಶಾಮಕ ಠಾಣೆಗಳಿಗೆ ಸಂಪರ್ಕ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ರಾಜ್ಯದಲ್ಲಾಗುವ ಯಾವುದೇ ಅಗ್ನಿದುರಂತ, ಅಪಘಾತ, ಪ್ರವಾಹ, ಭೂಕುಸಿತ, ಕಟ್ಟಡ ಕುಸಿತ ಇತ್ಯಾದಿಗಳ ನೇರ ನಿರ್ವಹಣೆ ಮಾಡುವ ವ್ಯವಸ್ಥೆಯಿದೆ.
ವೆಹಿಕಲ್ ಟ್ರ್ಯಾಕ್ ಮಾನಿಟರಿಂಗ್ ಸಿಸ್ಟಂ ಅಳವಡಿಸಿರುವುದರಿಂದ ಯಾವುದೇ ತುರ್ತು ಸಂದರ್ಭದಲ್ಲಿ ದುರಂತ ನಡೆದ ಸ್ಥಳದಲ್ಲಿ ನಡೆಯುವ ರಕ್ಷಣಾ ಕಾರ್ಯಾಚರಣೆಯನ್ನು ಈ ನಿರ್ವಹಣಾ ಕೇಂದ್ರದಿಂದ ನೇರವಾಗಿ ವೀಕ್ಷಿಸಬಹುದಾಗಿದೆ. ಈ ಕೇಂದ್ರ ದಿನದ 24 ತಾಸು ಸಾರ್ವಜನಿಕ ಸೇವೆ ನೀಡಲಿದೆ.