ಉತ್ತರ ಕರ್ನಾಟಕದ ವ್ಯಕ್ತಿ ಮುಖ್ಯಮಂತ್ರಿ ಆದರೂ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಲೆಕ್ಕಾಚಾರ ಕಳಪೆಯಾಗಿದೆ. ಹಣ ಬಿಡುಗಡೆ ಮತ್ತು ಬಳಕೆಯಲ್ಲಿ ಬೊಮ್ಮಾಯಿ ಸರ್ಕಾರ ಮೂರನೇ ತ್ರೈಮಾಸಿಕ ಅನುದಾನ ಬಿಡುಗಡೆಯಲ್ಲೂ ಉತ್ತಮ ಪ್ರದರ್ಶನ ನೀಡಿಲ್ಲ.
ಬೆಂಗಳೂರು: ಬೊಮ್ಮಾಯಿ ಸರ್ಕಾರದ ಕೊನೆಯ ಬೆಳಗಾವಿ ಅಧಿವೇಶನಕ್ಕೆ ವೇದಿಕೆ ಸಜ್ಜಾಗಿದೆ. ಉತ್ತರ ಕರ್ನಾಟಕ ಭಾಗದ ಜನರ ಆಶೋತ್ತರಗಳನ್ನು ಈಡೇರಿಸುವ ವೇದಿಕೆ ಬೆಳಗಾವಿ ಅಧಿವೇಶನ.
ಆದರೆ ಇತ್ತ ಉತ್ತರ ಕರ್ನಾಡಕ ಭಾಗದ ಕಲ್ಯಾಣಕ್ಕಾಗಿನ ವಿಶೇಷ ಅಭಿವೃದ್ಧಿ ಯೋಜನೆಯ ಅನುದಾನ ಬಳಕೆಯಲ್ಲಿ ಬೊಮ್ಮಾಯಿ ಸರ್ಕಾರ ವಿಫಲವಾಗಿದೆ ಎನ್ನಲಾಗಿದೆ.
ಬೊಮ್ಮಾಯಿ ಸರ್ಕಾರ ವಿಶೇಷ ಅಭಿವೃದ್ಧಿ ಯೋಜನೆಯ ಅನುಷ್ಠಾನದಲ್ಲಿ ಎಡವಿದೆ. ಆರ್ಥಿಕ ವರ್ಷದ ಮುಕ್ತಾಯದ ಹಂತಕ್ಕೆ ಬಂದರೂ ಬೊಮ್ಮಾಯಿ ಸರ್ಕಾರ ವಿಶೇಷ ಅಭಿವೃದ್ಧಿ ಯೋಜನೆಯಡಿ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗಾಗಿನ ಅನುದಾನ ಬಳಸುವಲ್ಲಿ ವಿಫಲವಾಗಿದೆ. 2022-23 ಸಾಲಿನ ಎಂಟು ತಿಂಗಳು ಕಳೆದರೂ ವಿಶೇಷ ಅಭಿವೃದ್ಧಿ ಯೋಜನೆಯ ಪ್ರಗತಿಗೆ ಇನ್ನೂ ವೇಗ ಸಿಕ್ಕಿಲ್ಲ. ಆದ ಪ್ರಗತಿ ತೀರಾ ಶೋಚನೀಯವಾಗಿದೆ.
ಡಾ.ನಂಜುಂಡಪ್ಪ ವರದಿಯಂತೆ ಹಿಂದುಳಿದ ತಾಲೂಕುಗಳಿಗೆ ವಿಶೇಷ ಅಭಿವೃದ್ಧಿ ಯೋಜನೆಯಡಿ 12 ವರ್ಷಗಳಿಂದ ಅನುದಾನ ನೀಡಲಾಗುತ್ತಿದೆ. ಸಿಎಂ ಉತ್ತರ ಕರ್ನಾಟಕ ಭಾಗದವರೇ ಆದರೂ ಆ ಪ್ರದೇಶದ ಅಭಿವೃದ್ಧಿಗೆ ನೀಡಬೇಕಾದ ಅನುದಾನ ಮಾತ್ರ ಸರಿಯಾಗಿ ಬಳಕೆ ಆಗಿಲ್ಲ. ಬೊಮ್ಮಾಯಿ ಸರ್ಕಾರ ವಿಶೇಷ ಅಭಿವೃದ್ಧಿ ಯೋಜನೆಯಡಿ ಅನುದಾನ ಬಳಕೆಯಲ್ಲಿ ಎಂಟು ತಿಂಗಳು ಕಳೆದರೂ ಅತ್ಯಂತ ಕಳಪೆ ಪ್ರದರ್ಶನ ಮುಂದುವರಿಸಿದೆ.