ಚಿಕ್ಕಮಗಳೂರು: ಬದುಕಿಗಾಗಿ ಬೆಳೆ ಬೆಳೆದು ಲಾಕ್‍ಡೌನ್‍ನಿಂದ ಕೊಳ್ಳುವವರಿಲ್ಲದೆ ಕಂಗಾಲಾಗಿದ್ದ ರೈತರ ಹೊಲಗಳಿಗೆ ಹೋಗಿ ಜಿಲ್ಲೆಯ ಕಡೂರಿನ ಮಾಜಿ ಶಾಸಕ ವೈ.ಎಸ್.ವಿ.ದತ್ತ ಸಾಂಕೇತಿಕವಾಗಿ ರೈತರು ಹೇಳಿದ ಬೆಲೆಗೆ ಈರುಳ್ಳಿ, ಟೊಮಾಟೊ ಹಾಗೂ ಕಲ್ಲಂಗಡಿ ಖರೀದಿಸಿದ್ದಾರೆ.
ಒಂದೆರಡು ಎಕ್ರೆಯಲ್ಲಿ ರೈತರು ಬದುಕಿಗಾಗಿ ನಾನಾ ಬೆಳೆ ಬೆಳೆದಿರುತ್ತಾರೆ. ಬೆಲೆ ಇದ್ದಾಗ ಬೆಳೆ ಇರಲ್ಲ. ಬೆಳೆ ಇದ್ದಾಗ ಬೆಲೆ ಇರಲ್ಲ. ರಾಜ್ಯದ ರೈತರದ್ದು ಶೋಚನಿಯ ಪರಿಸ್ಥಿತಿ. ರೈತರ ಬಹುಪಾಲು ಜೀವನ ಮಧ್ಯವರ್ತಿಗಳ ಜೇಬು ಸೇರುತ್ತೆ. ಅದರಲ್ಲೂ ಲಾಕ್‍ಡೌನ್ ವೇಳೆಯಲ್ಲಂತೂ ರೈತರ ಸ್ಥಿತಿ ಹೇಳತೀರದ್ದಾಗಿದೆ. ಎಲ್ಲದಕ್ಕೂ ಸರ್ಕಾರದ ಕೈ ಕಾಯದೆ, ಜನಪ್ರತಿನಿಧಿಗಳ ನಮ್ಮ ಸಾಮಾಜಿಕ ಜವಾಬ್ದಾರಿಯೂ ಇದೆ. ಎಲ್ಲದಕ್ಕೂ ಸರ್ಕಾರವನ್ನೇ ಕಾಯೋದು ಸೂಕ್ತವಲ್ಲ. ಹಾಗಾಗಿ, ನಮ್ಮ ಅಳಿಲೂ ಸೇವೆಯೂ ಇರಲೆಂದು ರೈತರ ಹೊಲಗಳಿಗೆ ಹೋದ ಮಾಜಿ ಶಾಸಕ ವೈ.ಎಸ್.ವಿ.ದತ್ತ ರೈತರಿಂದ 15 ಟನ್ ಕಲ್ಲಂಗಡಿ, 15 ಟನ್ ಟೊಮಾಟೊ ಹಾಗೂ 10 ಟನ್ ಈರುಳ್ಳಿ ಖರೀದಿಸಿದ್ದಾರೆ.

ಸುಮಾರು ಒಂದೂವರೆ ಲಕ್ಷ ಮೌಲ್ಯದ ಈರುಳ್ಳಿ, ಟೊಮಾಟೊ ಹಾಗೂ ಕಲ್ಲಂಗಡಿ ಖರೀದಿಸಿದ್ದು, ನಾಳೆಯಿಂದ ಕಡೂರು ಹಾಗೂ ಬೀರೂರಿನಿ ಬಡವರಿಗೆ ಈ ಬೆಳೆಯನ್ನ ಹಂಚಲು ಮುಂದಾಗಿದ್ದಾರೆ. ರೈತರ ಹೊಲಗಳಿಗೆ ಭೇಟಿ ನೀಡಿದ್ದ ವೈ.ಎಸ್.ವಿ.ದತ್ತ, ರೈತರಿಂದ ನೇರವಾಗಿ ಖರೀದಿಸಿದ್ದಾರೆ. ಅದೂ ರೈತರು ಹೇಳಿದ ದರಕ್ಕೆ. ಒಂದು ರೂಪಾಯಿ ಹಿಂದೆ-ಮುಂದೆ ಚೌಕಾಸಿ ಮಾಡದೆ ಅವರು ಹೇಳಿದ ದರಕ್ಕೆ ಖರೀದಿಸಿದ್ದಾರೆ. ಒಂದು ಲಕ್ಷ ಖರ್ಚು ಮಾಡಿ ಮೂರು ಎಕರೆಯಲ್ಲಿ ಕಲ್ಲಂಗಡಿ ಬೆಳೆದಿದ್ದ ರೈತ, ಕೊಳ್ಳುವವರಿಲ್ಲದೆ ಹೊಲದಲ್ಲೇ ಬಿಟ್ಟು ಕಂಗಾಲಾಗಿದ್ದ. ಇಂದು ವೈ.ಎಸ್.ವಿ.ದತ್ತ ಹೊಲಕ್ಕೆ ಹೋಗಿ ಕೆ.ಜಿ.ಗೆ ಏಳು ರೂಪಾಯಿಯಂತೆ 15 ಟನ್ ಕಲ್ಲಂಗಡಿ ಖರೀದಿಸಿರೊದು ರೈತನ ಆರ್ಥಿಕ ನಷ್ಟವನ್ನು ಒಂದಷ್ಟು ಕಡಿಮೆ ಮಾಡಿದೆ.

ಸರಳ ರಾಜಕಾರಣಿ ದತ್ತ: ಮಾಜಿ ಶಾಸಕ ವೈ.ಎಸ್.ವಿ.ದತ್ತ ಅಧಿಕಾರದಲ್ಲಿರಲಿ ಇಲ್ಲದಿರಲಿ. ಸರಳ ಶಾಸಕ ಎಂದೇ ಖ್ಯಾತಿ. ಎಲ್ಲೆಂದರಲ್ಲಿ ಕುಳಿತುಕೊಳ್ಳುವುದು, ಊಟ-ತಿಂಡಿ ಮಾಡೋದು ಅವರ ಸರಳತನಕ್ಕೆ ಹಿಡಿದ ಕೈಗನ್ನಡಿ. ದತ್ತ ಮೇಷ್ಟ್ರ ಇಂತಹ ಸರಳತನಕ್ಕೆ ಹಲವು ಉದಾಹರಣೆಗಳಿವೆ. ಇಂದೂ ಕೂಡ ತಾಲೂಕಿನ ಎರಡು ಹಳ್ಳಿಗಳಿಗೆ ಭೇಟಿ ನೀಡಿ ರೈತರ ಬೆಳೆ ಖರೀದಿಸಿ ರೈತರೊಂದಿಗೆ ಮಾತನಾಡಿದ ಅವರ ಕಷ್ಟ-ಸುಖ ಆಲಿಸಿದ ದತ್ತ, ಗೌಡನಕಟ್ಟೆಹಳ್ಳಿಯಲ್ಲಿ ಜನರೇ ತಯಾರಿಸಿದ್ದ ಚಿತ್ರಾನ್ನ ಹಾಗೂ ಬಜ್ಜಿಯನ್ನ ಅದೇ ಜನರ ಮಧ್ಯೆ ಗೋಡಾನ್‍ನಲ್ಲಿ ಕೂತು ಊಟ ಮಾಡಿದರು. ದತ್ತ ಅವರ ಈ ನಡೆ ಹೊಸತೇನಲ್ಲದಿದ್ದರೂ, ಈ ಸರಳತನಕ್ಕೆ ಹಳ್ಳಿಯ ಜನ ಕೂಡ ಫಿದಾ ಆಗಿದ್ದಾರೆ.

Laxmi News 24×7