ಚಿಕ್ಕೋಡಿ: ಕಳ್ಳ ಮಾರ್ಗದಿಂದ ರಾಜ್ಯ ಪ್ರವೇಶಿಸಿದ ಮೂವರ ವಿರುದ್ಧ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಾರಾಷ್ಟ್ರದಿಂದ ಪಾಸ್ ಇಲ್ಲದೇ ಕಳ್ಳ ಮಾರ್ಗದಿಂದ ಬಂದ ಮೂವರ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಮಹಾರಾಷ್ಟ್ರದ ಮೀರಜ ನಗರದಿಂದ ಯಾವುದೇ ಪಾಸ್ ಇಲ್ಲದೇ ಬಂದಿದ್ದ ಆರೋಪಿಗಳನ್ನು ಹುಕ್ಕೇರಿ ಪಿಎಸ್‍ಐ ಶಿವಾನಂದ ಗುಡಗನಟ್ಟಿ ಅವರ ತಂಡ ಪತ್ತೆ ಹಚ್ಚಿದೆ.
ಪತ್ನಿ ಹಾಗೂ ಮಗನನ್ನು ಕಳ್ಳ ಮಾರ್ಗದಿಂದ ಹುಕ್ಕೇರಿ ಪಟ್ಟಣದ ಕಲಾಲ್ ಗಲ್ಲಿಯ ಮನೆಗೆ ತಂದಿದ್ದ ಆರೋಪಿಯ ಮಾಹಿತಿ ತಿಳಿದು ಪೊಲೀಸರು ಆರೋಪಿಗಳನ್ನ ವಶಪಡೆದು ಕ್ವಾರಂಟೈನ್ ಮಾಡಿದ್ದಾರೆ. ಹುಕ್ಕೇರಿ ಪುರಸಭೆಯ ಮುಖ್ಯಾಧಿಕಾರಿ ಮೋಹನ ಜಾಧವ ಅವರು ನೀಡಿದ ದೂರಿನ ಅನ್ವಯ ಮೂವರ ಮೇಲೂ ಐಪಿಸಿ ಸೆಕ್ಷನ್ 188, 200, 269, 270, 34ರ ಮತ್ತು ಸಾಂಕ್ರಾಮಿಕ ರೋಗ ತಡೆ ಕಾಯ್ದೆಯ ಸೆಕ್ಷನ್ 51(ಬಿ)ರ ಅಡಿ ಅಂದರೆ ಸರ್ಕಾರದ ಆದೇಶ ಉಲ್ಲಂಘನೆ, ಸುಳ್ಳು ಘೋಷಣೆ ಆರೋಪ, ಸಾಂಕ್ರಾಮಿಕ ರೋಗ ಹರಡುವಿಕೆಗೆ ಸಹಕಾರ ಸೇರಿದಂತೆ ವಿವಿಧ ಕಾಯ್ದೆಗಳ ಅನ್ವಯ ಪ್ರಕರಣ ದಾಖಲು ಮಾಡಿದ್ದಾರೆ.
ಸದ್ಯ ಮೂವರು ಆರೋಪಿಗಳನ್ನು ಹುಕ್ಕೇರಿ ಪುರಸಭೆ ಅಧಿಕಾರಿಗಳು ಕ್ವಾರಂಟೈನ್ ಮಾಡಿ ನಿಗಾ ಇರಿಸಿದ್ದಾರೆ. ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.