ಚಿಕ್ಕೋಡಿ: ಸಂಕಷ್ಟದಲ್ಲಿರುವ ಜನರಿಗೆ ನೆರವಾಗಬೇಕಾಗಿರುವ ರಾಯಬಾಗ ಶಾಸಕರು ತಮ್ಮ ಕ್ಷೇತ್ರದಲಿ ಒಂದು ಊರಿಗೆ ಕೇವಲ 20 ದಿನಸಿ ಕಿಟ್ ವಿತರಣೆ ಮಾಡುತ್ತಿರುವುದು ವಿಷಾದನೀಯ ಸಂಗತಿ ಎಂದು ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಬಿ.ಆರ್.ಸಂಗಪ್ಪಗೋಳ ಆಕ್ರೋಶ ವ್ಯಕ್ತ ಪಡಿಸಿದರು.
ತಾಲೂಕಿನ ಮಜಲಟ್ಟಿ ಗ್ರಾಮದಲ್ಲಿ ಶುಕ್ರವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಯಬಾಗ ಶಾಸಕರ ಮೂರು ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿರುವ ಚಿಕ್ಕೋಡಿ ತಾಲೂಕಿನ ನಾಗರಮುನ್ನೋಳಿ ಹೋಬಳಿ ಹಳ್ಳಿಗಳ ಬಡ ಮತ್ತು ಸಾಮಾನ್ಯ ಜನರ ಸಮಸ್ಯೆಗೆ ರಾಯಬಾಗ ಶಾಸಕರು ಸ್ಪಂಧಿಸಬೇಕಾಗಿತ್ತು. ಆದರೆ ಶಾಸಕರು ಒಂದು ಊರಿಗೆ ಕೇವಲ 20 ಕಿಟ್ ವಿತರಿಸುವ ಮೂಲಕ ಒಂದು ಕೀಳುಮಟ್ಟದ ರಾಜಕೀಯ ಮುಖಾಂತರ ಜನರ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿದ್ದು, ಈಗಲೂ ಹೆಜ್ಜೆ ತಪ್ಪಿಲ್ಲ.
ಎಲ್ಲರಿಗೂ ಸರಿಸಮಾನವಾಗಿ ಕಿಟ್ ವಿತರಿಸುವ ಕೆಲಸ ಮಾಡಬೇಕು. ಇಲ್ಲವೆ ಕಿಟ್ ವಿತರಿಸುವುದನ್ನು ನಿಲ್ಲಿಸಬೇಕು ಎಂದು ಶಾಸಕರ ವಿರುದ್ಧ ಕಿಡಿ ಕಾರಿದರು.
ಇಂದಿನ ಭಯಾನಕ ಸಂದರ್ಭದಲ್ಲಿ ದೇಶದ ಪ್ರಧಾನಿ ನರೇಂದ್ರ ಮೋಧಿಯವರು ದೇಶಕ್ಕೆ 20 ಲಕ್ಷ ಕೋಟಿ ರೂ.ಗಳ ಪ್ಯಾಕೇಜ್ ಕೊಡುತ್ತಿರುವುದು ಅಭಿನಂದನಾರ್ಹ.
ಈ ಹಣದ ಸದ್ಬಳಕೆ ಮಾಡಿದಲ್ಲಿ ಬರುವ ದಿನಮಾನದಲ್ಲಿ ದೇಶದ ಅಂತರಾಷ್ಟ್ರೀಯ ಮಟ್ಟದಲ್ಲಿ ಎದ್ದು ಕಾಣಿಸಲಿದೆ ಎಂದರು.
ರೈತರು ಬೆಳೆದ ಬೆಳೆ ಮಾರಾಟಕ್ಕೆ ಮಾರುಕಟ್ಟೆ ವ್ಯವಸ್ಥೆ ಮಾಡಬೇಕು. ಇಷ್ರೇಲ್ ಮಾಡದರಿ ಕೃಷಿ ಪದ್ದತಿ ತರಬೇಕು. ರೈತರಿಗಾಗಿ ವಿಶೇ ಕಾರ್ಯಕ್ರಮ ತರಬೇಕು. ದೇಶದ ಪ್ರಗತಿ ಮತ್ತು ಸಮಾಜದಲ್ಲಿ ಸಮಾನತೆ ಬರಬೇಕಾದಲ್ಲಿ ಸಮಾನ ನಾಗರಿಕ ಕಾನೂನು ಜಾರಿಗೆ ತರಬೇಕು. ಎಸ್‍ಸಿ,ಎಸ್‍ಟಿ ಮಾದರಿಯಲ್ಲಿ ಓಬಿಸಿ ಜನರಿಗೂ ವೀಸಲಾತಿ ಕೊಡಬೇಕು ಎಂದು ಒತ್ತಾಯಿಸಿದರು.
ಕೊರೊನಾ ಕುರಿತಂತೆ ಬೇರೆ ಬೇರೆ ದೇಶಕ್ಕೆ ಹೋಲಿಸಿದರೇ ನಮ್ಮ ದೇಶದಲ್ಲಿ ಕೊರೊನಾ ನಿಯಂತ್ರಣದಲ್ಲಿದ್ದು, ಅದಕ್ಕೆ ದೇಶದ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಮುಂಜಾಗೃತಾ ಕ್ರಮ ಮತ್ತು ಆಡಳಿತ ವರ್ಗವಾದ ಕಂದಾಯ, ಪೊಲೀಸ್ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಮಾಡುತ್ತಿರುವ ಶ್ಲಾಘನೀಯ ಎಂದರು.