ಚಿತ್ರದುರ್ಗ: 17 ವರ್ಷದ ಬಾಲಕಿಯೊಬ್ಬಳು ಪೋಷಕರ ಬೈಗುಳ, ಕೂಲಿಗೆ ಕಳಿಸುವುದು, ತಿರಸ್ಕಾರ ಭಾವದಿಂದ ನೊಂದು ಇಡೀ ಕುಟುಂಬಕ್ಕೆ ಮುದ್ದೆಯಲ್ಲಿ ವಿಷ ಬೆರೆಸಿ ಹತ್ಯೆಗೈದಿರುವ ಆಘಾತಕಾರಿ ಪ್ರಕರಣ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಇಸಾಮುದ್ರ ಗ್ರಾಮದಲ್ಲಿ ಜುಲೈ 12 ರಂದು ಈ ಘಟನೆ ನಡೆದಿದ್ದು, ವಿಧಿ ವಿಜ್ಞಾನ ಪ್ರಯೋಗಾಲಯದ(ಎಫ್‍ಎಸ್‍ಎಲ್) ವರದಿ ಮೂಲಕ ಮುದ್ದೆಯಲ್ಲಿ ವಿಷ ಬೆರಸಿರುವ ಸತ್ಯ ಬಯಲಾಗಿದೆ.
ಪೋಷಕರ ಬೈಗುಳ, ಕೂಲಿಗೆ ಕಳಿಸುವುದು, ತಿರಸ್ಕಾರ ಭಾವದಿಂದ ನೊಂದ ಬಾಲಕಿ, ಹೆತ್ತವರು, ಒಡಹುಟ್ಟಿದವರಿಗೆ ಮುದ್ದೆಯಲ್ಲಿ ಕ್ರಿಮಿನಾಶಕ ಬೆರೆಸಿಕೊಂದಿದ್ದಾಳೆ. ರಾತ್ರಿ ಮುದ್ದೆ ಹಾಗೂ ಹೆಸರುಕಾಳು ಸಾಂಬರ್ ಸೇವಿಸಿದ ತಂದೆ ತಿಪ್ಪಾನಾಯ್ಕ್(46), ತಾಯಿ ಸುಧಾಬಾಯಿ(43), ಸಹೋದರಿ ರಮ್ಯ(16), ವೃದ್ಧೆ ಗುಂಡಿಬಾಯಿ(75) ಸಾವಿಗೀಡಾಗಿದ್ದಾರ.
ಮತ್ತೋರ್ವ ಪುತ್ರ ರಾಹುಲ್(18) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದು, ಬಾಲಕಿ ಮಾತ್ರ ಸುರಕ್ಷಿತವಾಗಿದ್ದಾಳೆ. ಹೊಟ್ಟೆ ನೋವಿನ ಕಾರಣ ಅನ್ನ, ಸಾರು ಮಾತ್ರ ಸೇವಿಸಿರುವುದಾಗಿ ಬಾಲಕಿ ತಿಳಿಸಿದ್ದರಿಂದ ಅನುಮಾನಗೊಂಡ ಪೊಲೀಸರು ಈ ಕುರಿತಂತೆ ವಿಚಾರಣೆ ನಡೆಸಿದಾಗ, ಬಾಲಕಿಯೇ ವಿಷಬೆರೆಸಿ ನಾಲ್ವರನ್ನು ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ಹೀಗಾಗಿ ಬಾಲಕಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಭರಮಸಾಗರ ಪೊಲೀಸರು ತಿಳಿಸಿದ್ದಾರೆ.