ಚೆನ್ನೈ: ಪ್ರಿಯಕರನೊಂದಿಗೆ ಪುತ್ರಿ ಪರಾರಿಯಾಗುತ್ತಾಳೆ ಎಂದು ಭಾವಿಸಿದ ತಂದೆಯೇ ಪುತ್ರಿಯನ್ನು ಕೊಲೆ ಮಾಡಿದ ಘಟನೆ ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯಲ್ಲಿ ನಡೆದಿದೆ.
ಬಾಲಾಜಿ ಎಂಬಾತನೇ ಕೊಲೆ ಆರೋಪಿಯಾಗಿದ್ದಾನೆ. ಈತನ ಪುತ್ರಿ ಮೂರು ದಿನಗಳ ಹಿಂದೆ ಸ್ನಾನ ಮಾಡುವ ವೇಳೆ ಜಾರಿ ಬಿದ್ದು ಸಾವನ್ನಪ್ಪಿದ್ದಾಳೆ ಎಂದು ಹೇಳಲಾಗಿತ್ತು. ಗ್ರಾಮಸ್ಥರು ಅದನ್ನೇ ನಂಬಿದ್ದರು. ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದವರಿಗೆ ನೀಡಿದ್ದು ಅಂತ್ಯಕ್ರಿಯೆ ನೆರವೇರಿಸಲಾಗಿತ್ತು.
ಮರಣೋತ್ತರ ಪರೀಕ್ಷೆ ವರದಿಯಲ್ಲಿ ಕತ್ತು ಹಿಸುಕಿ ಕೊಲೆ ಮಾಡಿರುವುದು ಗೊತ್ತಾಗಿದೆ. ಕುಟುಂಬದವರು ಕೃತ್ಯದಲ್ಲಿ ಭಾಗಿಯಾಗಿರುವ ಅನುಮಾನದ ಮೇಲೆ ಪೊಲೀಸರು ಬಾಲಾಜಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದಾಗಿ ತಿಳಿಸಿದ್ದಾನೆ. ಯುವಕನೊಬ್ಬನನ್ನು ಪ್ರೀತಿಸಿದ್ದ ಬಾಲಾಜಿಯ ಪುತ್ರಿ ಆತನನ್ನು ಮದುವೆಯಾಗುವುದಾಗಿ ಹೇಳಿದ್ದಳು. ಆದರೆ ಮನೆಯವರಿಗೆ ಇಷ್ಟವಿಲ್ಲದೆ ಬೇರೆ ಮದುವೆ ಮಾಡಲು ಸಿದ್ಧತೆ ನಡೆಸಿದ್ದರು. ಇದಕ್ಕೆ ನಿರಾಕರಿಸಿದ ಯುವತಿ ಪ್ರಿಯಕರನೊಂದಿಗೆ ಓಡಿ ಹೋಗಲು ಯತ್ನಿಸಿದ್ದು, ಇದನ್ನು ಸಹಿಸದ ತಂದೆಯೇ ಮರ್ಯಾದೆ ಹೋಗುತ್ತದೆ ಎಂದು ಕೊಲೆ ಮಾಡಿದ್ದಾನೆ. ಬಳಿಕ ಜಾರಿ ಬಿದ್ದು ಮೃತಪಟ್ಟಿರುವುದಾಗಿ ಸುಳ್ಳು ಹೇಳಿದ್ದಾನೆ ಎನ್ನುವುದು ತನಿಖೆಯಲ್ಲಿ ಗೊತ್ತಾಗಿದೆ.
Laxmi News 24×7