ರಾಜ್ಯ ಜಲಸಂಪನ್ಮೂಲ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಮತ್ತೆ ಹೊಸದೆಹಲಿಗೆ ಹೊರಟಿದ್ದಾರೆ. ಕಳೆದ ಒಂದೂವರೆ ತಿಂಗಳಲ್ಲಿ ಸಚಿವರು ಮೂರನೇ ಬಾರಿ ದೆಹಲಿಗೆ ಪ್ರಯಾಣ ಬೆಳೆಸಿರುವುದು ಕುತೂಹಲ ಕೆರಳಿಸಿದೆ.
ಜಲಸಂಪನ್ಮೂಲ ಸಚಿವಾಲಯದ ಮಾಹಿತಿಯಂತೆ ಸಚಿವ ರಮೇಶ ಜಾರಕಿಹೊಳಿ ಬುಧವಾರ ದೆಹಲಿಗೆ ತೆರಳುವರು. ಅಂದು ರಾಜ್ಯದ ನೀರಾವರಿ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸಚಿವರನ್ನು ಭೇಟಿ ಮಾಡಿ ಚರ್ಚಿಸುವರು. ದೆಹಲಿಯಲ್ಲಿ ಶುಕ್ರವಾರದವರೆಗೂ ಜಾರಕಿಹೊಳಿ ವಾಸ್ತವ್ಯ ಕಾರ್ಯಕ್ರಮ ನಿಗದಿಯಾಗಿದೆ.
ಸಚಿವ ರಮೇಶ ಜಾರಕಿಹೊಳಿ ದೆಹಲಿ ಭೇಟಿಯಿಂದ ರಾಜಕೀಯ ವಲಯದಲ್ಲಿ ನಾನಾ ರೀತಿಯ ಚರ್ಚೆಗಳು ಶುರುವಾಗಿವೆ. ಕರ್ನಾಟಕ ಸಂಪುಟ ವಿಸ್ತರಣೆ ಸಂಬಂಧ ಚರ್ಚೆಗಳು ಶುರುವಾಗಿರುವ ಹೊತ್ತಿನಲ್ಲೇ ಸಚಿವರ ದೆಹಲಿ ಪ್ರವಾಸ ಕುತೂಹಲ ಕೆರಳಿಸಿದೆ. ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಸಚಿವರು ಮತ್ತೆ ಲಾಭಿ ನಡೆಸುವ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿದೆ.