ಬೆಳಗಾವಿ : ‘ ಕಾಂಗ್ರೆಸ್ ಪಕ್ಷದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಹಲವಾರು ವಿಚಾರಗಳನ್ನು ಮಾಡಲಾಗುತ್ತಿದೆ. ಕಿಸಾನ್ ಕಾಂಗ್ರೆಸ್ ನೂತನ ಪದಾಧಿಕಾರಿಗಳು ಸಹ ವಿಶೇಷ ಆಸಕ್ತಿ ಬೆಳೆಸಿಕೊಂಡು ಪಕ್ಷಕ್ಕೆ ಶಕ್ತಿ ತುಂಬವ ಕೆಲಸ ಮಾಡಬೇಕು’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಕಾರ್ಯಕರ್ತರಿಗೆ ಕರೆ ನೀಡಿದರು.
ಇಲ್ಲಿನ ಕಾಂಗ್ರೆಸ್ ಭವನದಲ್ಲಿ ಇಂದು ಬೆಳಗಾವಿ ಜಿಲ್ಲಾ ಕಿಸಾನ್ ಕಾಂಗ್ರೆಸ್ ನೂತನ ಪದಾಧಿಕಾರಿಗಳಿಗೆ ಆದೇಶ ಪತ್ರ ವಿತರಿಸಿದರು. ಬಳಿಕ ಮಾತನಾಡಿ, ‘ಕಾಂಗ್ರೆಸ್ ಪಕ್ಷವನ್ನು ಶಿಸ್ತಿನಲ್ಲಿ ತೆಗೆದುಕೊಂಡು ಹೋಗಬೇಕು ಎಂಬ ಉದ್ದೇಶದಿಂದ ಕೆಪಿಸಿಸಿ ಅಧ್ಯಕ್ಷರು ಹಲವು ರೀತಿಯ ಬದಲಾವಣೆಗಳನ್ನು ತಂದಿದ್ದಾರೆ. ವಿವಿಧ ರೀತಿಯ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ನಾವು ಸಹ ಅವರಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕು’ ಎಂದರು.
‘ನೂತನ ಪದಾಧಿಕಾರಿಗಳ ಹಾಗೂ ಕಾರ್ಯಕರ್ತರು ಹೊಸ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಪಕ್ಷ ಸಂಘಟನೆ ಮಾಡಲು ಪ್ರಯತ್ನಿಸಬೇಕು. ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಿಳಿಸಬೇಕು. ಕೃಷಿ ತಿದ್ದುಪಡಿ ಕಾಯ್ದೆಗಳ ಬಗ್ಗೆ ರೈತರಿಗೆ ತಿಳಿಸುವ ಪ್ರಯತ್ನ ಮಾಡಬೇಕು. ಜನರನ್ನು ಜಾಗೃತಿಗೊಳಿಸುವ ನಿಟ್ಟಿನಲ್ಲಿ ಕಾರ್ಯಗಳನ್ನು ಕೈಗೊಳ್ಳಬೇಕು’ ಎಂದು ತಿಳಿಸಿದರು.
‘ಪ್ರತಿಯೊಬ್ಬರ ಮೇಲೂ ಜವಾಬ್ದಾರಿ ಹೆಚ್ಚಿದೆ. ಕೇಂದ್ರ ಸರ್ಕಾರ ರೈತರ ವಿರೋಧದ ನಡುವೆಯೂ ಮೂರು ಕೃಷಿ ತಿದ್ದುಪಡೆ ಕಾಯ್ದೆ ಜಾರಿಗೆ ತರಲು ಹೊರಟಿದೆ . ಕೃಷಿ ಮಸೂದೆ ಬಗ್ಗೆ ನೀವು ಮೊದಲು ತಿಳಿಕೊಂಡು, ರೈತರಿಗೆ ತಿಳಿಸಬೇಕು. ಪಂಜಾಬ, ಹರಿಯಾಣ ರೈತರು ದೆಹಲಿಯಲ್ಲಿ ಏಕೆ ನಿರಂತರ ಹೋರಾಟ ನಡೆಸಿದ್ದಾರೆ. ಇದರಿಂದ ರೈತರಿಗೆ ಆಗುವ ಸಮಸ್ಯೆಗಳ ಬಗ್ಗೆ ಅನ್ನದಾತರಿಗೆ ಮನವರಿಕೆ ಮಾಡಬೇಕು’ ಎಂದು ಹೇಳಿದರು.
ಬೆಳಗಾವಿ ಗ್ರಾಮೀಣ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಕಲ್ಲಪ್ಪ ಲಕ್ಕಾರ, ರಾಜೇಂದ್ರ ಪಾಟೀಲ್ , ಇಮ್ರಾನ್ ತಪಕೀರ , ಮುಖಂಡರು, ಕಾರ್ಯಕರ್ತರು ಇದ್ದರು.