ಬೆಂಗಳೂರು: ಮಹಿಳಾ ಕಸ್ಟಮ್ಸ್ ಅಧಿಕಾರಿಗೆ ಬ್ಲ್ಯಾಕ್‌ಮೇಲ್, ಲೈಂಗಿಕ ದೌರ್ಜನ್ಯ ಆರೋಪದಡಿ ಉದ್ಯಮಿಯೋರ್ವನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಉದ್ಯಮಿ ಎಂ.ಕೃಪಲಾನಿ ಎಂಬಾತನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಮಹಿಳಾ ಅಧಿಕಾರಿಗೆ ಬ್ಲ್ಯಾಕ್‌ಮೇಲ್ ಮಾಡಿ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೆ ಹೇಳಿದಂತೆ ಕೇಳದಿದ್ದರೆ ಖಾಸಗಿ ಫೋಟೋ, ವೀಡಿಯೋ ವೈರಲ್ ಮಾಡುವುದಾಗಿ ಆರೋಪಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಕೃಪಲಾನಿ ಕಿರುಕುಳಕ್ಕೆ ಬೇಸತ್ತು ಮಹಿಳಾ ಅಧಿಕಾರಿ ಕೊನೆಗೂ ಪೊಲೀಸರಿಗೆ ದೂರು ನೀಡಿದ್ದು, ಯಲಹಂಕ ಠಾಣೆಯಲ್ಲಿ ಈತನ ವಿರುದ್ಧ ಅತ್ಯಾಚಾರದ ಪ್ರಕರಣ ದಾಖಲಿಸಿದ್ದರು. ಬಳಿಕ ಇಂದಿರಾನಗರ ಪೊಲೀಸ್ ಠಾಣೆಗೆ ಕೇಸ್ ವರ್ಗಾವಣೆಗೊಂಡಿತ್ತು. ಈ ಬಗ್ಗೆ ತನಿಖೆಗೆ ಪುಲಕೇಶಿನಗರ ಎಸಿಪಿ ಹಾಗೂ ಇನ್ಸ್ಪೆಕ್ಟರ್‌ಗೆ ಅಧಿಕಾರಿಗಳು ಸೂಚಿಸಿದ್ದರು. ಇದೀಗ ಆರೋಪಿ ಕೃಪಲಾನಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಅತ್ಯಾಚಾರ ಅಲ್ಲದೇ ಆರೋಪಿ ಮೇಲೆ ಹಲವು ಗಂಭೀರ ಆರೋಪಗಳನ್ನು ಮಹಿಳಾ ಅಧಿಕಾರಿ ಮಾಡಿದ್ದು, ಎಲೆಕ್ಟ್ರಾನಿಕ್ ಬ್ಯುಸಿನೆಸ್ ನಡೆಸುತ್ತಿದ್ದ ಕೃಪಲಾನಿ ಕಸ್ಟಮ್ಸ್ ಕಣ್ತಪ್ಪಿಸಿ ಸಾಕಷ್ಟು ವ್ಯವಹಾರ ನಡೆಸುತ್ತಿದ್ದ ಎಂಬ ಆರೋಪ ಈತನ ವಿರುದ್ಧ ಕೇಳಿಬಂದಿದೆ. ಕೃಪಲಾನಿಗೆ 9 ವರ್ಷದ ಹಿಂದೆ ಮಹಿಳಾ ಕಸ್ಟಮ್ಸ್ ಅಧಿಕಾರಿ ಪರಿಚಯವಾಗಿದ್ದು, ಆಕೆ ಜೊತೆಗೆ ಪ್ರೀತಿ ನಾಟಕವಾಡಿ ಸಲುಗೆ ಬೆಳೆಸಿಕೊಂಡಿದ್ದ. ಅಲ್ಲದೇ ಮದುವೆ ಆಮಿಷವೊಡ್ಡಿ ಕೆಲಸದ ಕೆಲ ಲೂಪ್‌ಹೋಲ್ ತಿಳಿದಿದ್ದ. ಆಕೆಯನ್ನು ಬಳಸಿಕೊಂಡು ಕೆಲ ಕಸ್ಟಮ್ಸ್ ಅಧಿಕಾರಿಗಳ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಹಣ ಕೂಡ ಪಡೆದಿದ್ದ ಎನ್ನಲಾಗಿದೆ. ಕೃಪಲಾನಿ ಜಾಲಕ್ಕೆ ಸಿಲುಕಿ ಹಲವು ಕಸ್ಟಮ್ಸ್ ಅಧಿಕಾರಿಗಳು ನರಳಿದ್ದಾರೆ ಎನ್ನಲಾಗಿದ್ದು, ಆ ಕಾರಣ ಈತನಿಂದ ಅನ್ಯಾಯವಾಗಿದ್ದರೆ ದೂರು ನೀಡುವಂತೆ ಪೊಲೀಸರು ಸೂಚನೆ ನೀಡಿದ್ದಾರೆ.
Laxmi News 24×7