ಬೆಂಗಳೂರು (ಮೇ 6): ಲಾಕ್‌ಡೌನ್ ಆರಂಭವಾದಾಗಿನಿಂದಲೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ತಿರುಗಾಡುತ್ತಲೇ ಇದ್ದಾರೆ. ಅಧಿಕಾರಿಗಳ ಜೊತೆ ಸಭೆ ನಡೆಸಿ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಸದ್ಯ ರಾಜ್ಯದ ಪರಿಸ್ಥಿತಿ ಹೇಗಿದೆ ಎನ್ನುವುದರ ಬಗ್ಗೆ ಬಿಎಸ್ವೈ ಇಂದು 11 ಗಂಟೆಯ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಲಿದ್ದಾರೆ.
ಲಾಕ್‌ಡೌನ್ ಶುರುವಾದ ದಿನಾಂಕ ಅಂದರೆ ಮಾ.21 ನೇ ತಾರೀಕಿನಿಂದ ಇಲ್ಲಿಯವರೆಗಿನ ಪರಿಣಾಮ, ಕೋರೋನಾ ತಡೆಗಟ್ಟಲು ಲಾಕ್‌ಡೌನ್ ಎಷ್ಟರಮಟ್ಟಿಗೆ ಸಹಕಾರಿಯಾಗಿದೆ, ಕೊರೊನಾ ತಡೆಗಟ್ಟುವಲ್ಲಿ ಸರ್ಕಾರ ತೆಗೆದುಕೊಂಡಿರುವ ಕ್ರಮಗಳೇನು, ಸರ್ಕಾರದ ನಿರ್ಧಾರಗಳ ಪ್ರಯೋಜನಗಳೇನು, ಜನಸ್ಪಂದನೆ ಹೇಗಿತ್ತು ಎನ್ನುವ ಬಗ್ಗೆ ಸಿಎಂ ಮಾಹಿತಿ ನೀಡಲಿದ್ದಾರೆ.
ಪೊಲೀಸರು, ಪೌರ ಕಾರ್ಮಿಕರು, ವೈದ್ಯರು ಸೇರಿ ಸಾಕಷ್ಟು ಜನರು ಕೊರೋನಾ ವಿರುದ್ಧ ಹೋರಾಟಕ್ಕೆ ಟೊಂಕ ಕಟ್ಟಿ ನಿಂತಿದ್ದಾರೆ. ಇವರ ಸಹಕಾರ ಹಾಗೂ ಸಹಾಯವನ್ನು ಸುದ್ದಿಗೋಷ್ಠಿಯಲ್ಲಿ ಬಿಎಸ್ವೈ ನೆನೆಯುವ ಸಾಧ್ಯತೆ ಇದೆ.
ಈಗಾಗಲೇ ಬೆಂಗಳೂರಲ್ಲಿ ಲಾಕ್‌ಡೌನ್ ಸಡಿಲಿಕೆ ಮಾಡಲಾಗಿದೆ. ಹೀಗಾಗಿ ಅದರ ಬಗೆಗಿನ ಮಾಹಿತಿ, ರಾಜ್ಯದ ಆರ್ಥಿಕ ಸ್ಥಿತಿಗತಿ, ಆರ್ಥಿಕ ಪುನಶ್ಚೇತನ ಕ್ಕಾಗಿ ತೆಗೆದುಕೊಳ್ಳುತ್ತಿರುವ ಕ್ರಮಗಳು, ಕಾರ್ಮಿಕರ ಪ್ರಯಾಣ ವಿಚಾರದಲ್ಲಿ ಆದ ಗೊಂದಲಗಳು, ಸರ್ಕಾರದ ಕ್ರಮಗಳು,ವಿಪಕ್ಷಗಳ ಟೀಕೆ, ಆರ್ಥಿಕ ಪುನಶ್ಚೇತನಕ್ಕೆ ಮುಂದಿನ ಹೊಸ ಕ್ರಮಗಳು ಸೇರಿ 46 ದಿನಗಳ ಕರ್ನಾಟಕ ಲಾಕ್‌ಡೌನ್ ಬಗ್ಗೆ ಸಮಗ್ರ ಮಾಹಿತಿಯನ್ನು ಸಿಎಂ ಬಿಚ್ಚಿಡಲಿದ್ದಾರೆ ಎನ್ನಲಾಗಿದೆ.
Laxmi News 24×7