Breaking News

ಎಡಬಿಡಂಗಿ, ಅವಕಾಶವಾದಿಯಿಂದ ನಾವು ಸ್ವಾಭಿಮಾನದ ಪಾಠ ಕಲಿಯಬೇಕಾಗಿಲ್ಲ; ಸಿದ್ದರಾಮಯ್ಯಗೆ ಕುಮಾರಸ್ವಾಮಿ ತಿರುಗೇಟು

Spread the love

ಬೆಂಗಳೂರು : ಆತ್ಮವಂಚನೆಯ ರಾಜಕಾರಣಿಯಾದ ನಿಮ್ಮಿಂದ ಜೆಡಿಎಸ್​ ಪಕ್ಷದವರು ಕಲಿಯಬೇಕಾಗಿದ್ದು ಏನೂ ಇಲ್ಲ. ಅಧಿಕಾರದ ಆಸೆಗಾಗಿ ಬೇರೆ ಪಕ್ಷಕ್ಕೆ ಜಿಗಿದವರು ನೀವು. ನಿಮ್ಮಿಂದ ನಾವು ಕಲಿಯಬೇಕಾಗಿಲ್ಲ. ಈಗ ನಮ್ಮನ್ನು ಅವಕಾಶವಾದಿ ಪಕ್ಷ ಎಂದು ಹೇಳುತ್ತಿದ್ದೀರಿ. ಈ ಮೂಲಕ ನಿಮ್ಮ ಊಸರವಳ್ಳಿ ರಾಜಕಾರಣದ ಬಣ್ಣ ಬಯಲಾಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್​.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಸಿದ್ದರಾಮಯ್ಯನವರ ವಿರುದ್ಧ ಸರಣಿ ಟ್ವೀಟ್​ಗಳನ್ನು ಮಾಡಿರುವ ಮಾಜಿ ಸಿಎಂ ಕುಮಾರಸ್ವಾಮಿ, ಜೆಡಿಎಸ್​ ಅವಕಾಶವಾದಿ ಪಕ್ಷ ಎಂದು ಹೇಳಿದ್ದ ಸಿದ್ದರಾಮಯ್ಯನವರ ವಿರುದ್ಧ ಗುಡುಗಿದ್ದಾರೆ. ನೀವು ಎಂತಹ ಸ್ವಾರ್ಥಿ, ಎಡಬಿಡಂಗಿ ರಾಜಕಾರಣಿ ಎಂಬುದು ಇಡೀ ನಾಡಿಗೆ ಗೊತ್ತಿದೆ.

ನೀವು ದೇವೇಗೌಡರ ಸ್ವಾಭಿಮಾನದ ರಾಜಕಾರಣದ ಬಗ್ಗೆ ಮಾತನಾಡುವ ನೈತಿಕತೆ ಉಳಿಸಿಕೊಂಡಿಲ್ಲ ಎಂದು ಕುಮಾರಸ್ವಾಮಿ ಟ್ವಿಟ್ಟರ್​ನಲ್ಲಿ ಟೀಕಿಸಿದ್ದಾರೆ.

ಅಧಿಕಾರದ ಲಾಲಸೆಯಿಂದ ಕಾಂಗ್ರೆಸ್​ಗೆ ಜಿಗಿದ ಸಿದ್ದರಾಮಯ್ಯ ‘ಜೆಡಿಎಸ್ ಅವಕಾಶವಾದಿ ಪಕ್ಷ’ ಎನ್ನುವ ಮೂಲಕ ತಮ್ಮ ಊಸರವಳ್ಳಿ ರಾಜಕಾರಣದ ನಿಜಬಣ್ಣ ಬಯಲು ಮಾಡಿಕೊಂಡಿದ್ದಾರೆ. ಜೆಡಿಎಸ್ ಪಕ್ಷದಲ್ಲಿದ್ದಾಗ ಅಧಿಕಾರ, ಸ್ಥಾನ-ಮಾನಗಳನ್ನು ಅನುಭವಿಸಿ ತಮ್ಮ ಬೆಂಬಲಿಗರೊಂದಿಗೆ ಗಂಟು-ಮೂಟೆ ಕಟ್ಟಿಕೊಂಡು ಅಧಿಕಾರದ ಆಸೆಗಾಗಿ, ಅವಕಾಶವಾದಿ ಹಾದಿ ಹಿಡಿದ ಕೃತಘ್ನಗೇಡಿತನದ ಸಿದ್ದರಾಮಯ್ಯ ಅವರಿಂದ ನಮ್ಮ ಪಕ್ಷ ಸ್ವಾಭಿಮಾನದ ಪಾಠ ಕಲಿಯಬೇಕಿಲ್ಲ ಎಂದು ಹೆಚ್​.ಡಿ. ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

ನಿಮ್ಮ ಸ್ವಾಭಿಮಾನದ ಪ್ರಲಾಪ ಮಠದೊಳಗಿನ‌ ಬೆಕ್ಕಿನ ಮುಖವಾಡದಂತಿದೆ. ಕಾಂಗ್ರೆಸ್ ಮುಖ್ಯಮಂತ್ರಿಯಾಗಿದ್ದಾಗಲೇ ಬಹಿರಂಗವಾಗಿ ಕಾಂಗ್ರೆಸ್ ಪಕ್ಷ ನಿರ್ನಾಮವಾಗಬೇಕು. ಇದನ್ನು ಬುಡಸಹಿತ ಕಿತ್ತೊಗೆಯಬೇಕು ಎಂದು ಬಹಿರಂಗವಾಗಿ ಅಂತರಂಗದ ಮಾತನ್ನು ಉದ್ಗರಿಸಿದ್ದ ನೀವು ಎಂತಹ ಸ್ವಾರ್ಥಿ ಮತ್ತು ಎಡಬಿಡಂಗಿತನದ ರಾಜಕಾರಣಿ ಎಂಬುದು ಇಡೀ ನಾಡಿಗೆ ಗೊತ್ತಿದೆ ಎಂದು ಟೀಕಿಸಿದ್ದಾರೆ.

ಅಧಿಕಾರದ ನಿರ್ಮೋಹ, ಸ್ವಾಭಿಮಾನಕ್ಕೆ ಕಟ್ಟುಬಿದ್ದು ದೇವೇಗೌಡರು ಪ್ರಧಾನಿ ಹುದ್ದೆಯನ್ನೇ ತ್ಯಜಿಸಿ ಬಂದರು. ಅಧಿಕಾರ ಉಳಿಸಿಕೊಳ್ಳಬೇಕೆಂದಿದ್ದರೆ ಪ್ರಧಾನಿಯಾಗಿ ಮುಂದುವರಿಯಬಹುದಿತ್ತು. ದೇವೇಗೌಡರ ಈ ಸ್ವಾಭಿಮಾನಿ ರಾಜಕಾರಣವನ್ನು ಇಷ್ಟು ಬೇಗ ಮರೆತು ಬಿಟ್ಟಿರಾ? ಆತ್ಮವಂಚನೆಯ ರಾಜಕಾರಣಿಯಿಂದ ಜೆಡಿಎಸ್ ಕಲಿಯುವುದು ಏನೇನೂ ಇಲ್ಲ ಎಂದು ಟ್ವೀಟ್ ದಾಳಿ ನಡೆಸಿದ್ದಾರೆ.

ಜೆಡಿಎಸ್ ಪಕ್ಷ ಅಧಿಕಾರದಲ್ಲಿ ಇದ್ದಾಗಲೆಲ್ಲಾ ಜನರ ಕಷ್ಟಕಾರ್ಪಣ್ಯಗಳು, ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಿದೆ. ಅಧಿಕಾರದ ಮದ ಮತ್ತು ದುರಹಂಕಾರವನ್ನು ಎಂದೂ ಪ್ರದರ್ಶನ ಮಾಡಿಲ್ಲ. ಅಧಿಕಾರದ ಅಲ್ಪಾವಧಿಯಲ್ಲೂ ಜನಕಲ್ಯಾಣ ಪಕ್ಷದ ಹೆಗ್ಗುರುತಾಗಿತ್ತು. ಪಕ್ಷಾಂತರ ಮಾಡಿ ಅಧಿಕಾರ ಹಿಡಿದ ನೀವು ಆ ಪಕ್ಷದಲ್ಲಿ ಬಿತ್ತಿದ ಬೆಳೆ ಮತ್ತು ಕಳೆ ಏನೆಂಬುದನ್ನು ನಿಮ್ಮನ್ನು ಆಲಂಗಿಸಿಕೊಂಡ ಪಕ್ಷದವರು ಈಗ ಅನುಭವಿಸುತ್ತಿದ್ದಾರೆ. ನಿಮ್ಮ ಸ್ವಾರ್ಥ ರಾಜಕಾರಣದ ಕುಟಿಲ ತಂತ್ರಗಳನ್ನು ಮರೆಮಾಚಿಕೊಳ್ಳಲು ಬೆಳೆದ ಪಕ್ಷಕ್ಕೆ ಮಗ್ಗುಲಲ್ಲಿ ಇದ್ದು ಬಾಕು ಹಾಕಿದವರ ಮಾರ್ಜಾಲ ಉಪದೇಶ ಯಾರಿಗೆ ಸಹ್ಯವಾದೀತು? ಎಂದು ಹೆಚ್​.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ತನುವಿನೊಳು ಕಪಟ
ಮನದೊಳು ಮರ್ಕಟ
ಆಚಾರ ಲಿಂಗವ ಭಂಗಗೊಳಿಸಿ
ಸಂಗ ಕೇಳಿಯ ಮನದ
ಮುಂದಣ ಆಸೆಯ ಮತಿಗೇಡಿ
ನೀನು ಶರಣನೆಂದು ಕೊಂಡೊಡೆ
ಲಿಂಗ – ಜಂಗಮ ಕೂಡಲ ಸಂಗನು ಮುನಿದು
ತಲೆ ಹೋಳಾದೀತು ಎಂದು ಹೆಚ್​.ಡಿ. ಕುಮಾರಸ್ವಾಮಿ ವಚನದ ಮೂಲಕ ಸಿದ್ದರಾಮಯ್ಯನವರಿಗೆ ತರಾಟೆ ತೆಗೆದುಕೊಂಡಿದ್ದಾರೆ.


Spread the love

About Laxminews 24x7

Check Also

ಮೂಡಲಗಿ – ಪಟ್ಟಣದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಮುಂದಿನ ದಿನಗಳಲ್ಲಿ ನಾಗರಿಕರ ಅಶೋತ್ತರಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು

Spread the loveಮೂಡಲಗಿ – ಪಟ್ಟಣದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಮುಂದಿನ ದಿನಗಳಲ್ಲಿ ನಾಗರಿಕರ ಅಶೋತ್ತರಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ