ಬಳ್ಳಾರಿ: ಜಿಲ್ಲೆಯ ಹೊಸಪೇಟೆ ನಗರದಲ್ಲಿ 11 ಕೊರೊನಾ ಪ್ರಕರಣಗಳು ಪತ್ತೆಯಾಗಿ ಆತಂಕ ಸೃಷ್ಟಿಯಾಗಿತ್ತು. ಇದೀಗ ಹೊಸಪೇಟೆಯಲ್ಲಿ ಮತ್ತೋರ್ವ ವ್ಯಕ್ತಿ ಡಿಸ್‍ಚಾರ್ಜ್ ಆಗಿದ್ದು, ಈ ಮೂಲಕ ಹೊಸಪೇಟೆ ನಗರ ಕೊರೊನಾ ಮುಕ್ತವಾಗಿದೆ.
ಜಿಲ್ಲೆಯಲ್ಲಿ ಒಟ್ಟು 17 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದವು. ಇದರಲ್ಲಿ 11 ಹೊಸಪೇಟೆಯಲ್ಲೇ ಇದ್ದವು. ಆದರೆ ಇದೀಗ ಹೊಸಪೇಟೆಯ 11 ಜನ ಸಹ ಡಿಸ್‍ಚಾರ್ಜ್ ಆಗಿದ್ದು, ಕೊರೊನಾ ಮುಕ್ತವಾಗಿದೆ. ಜಿಲ್ಲೆಯಲ್ಲಿ ಒಟ್ಟು 13ಜನ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ಒಟ್ಟು 17 ಕೊರೊನಾ ಪ್ರಕರಣಗಳ ಪೈಕಿ ಕೇವಲ ನಾಲ್ವರು ಮಾತ್ರ ಸಕ್ರಿಯ ಪ್ರಕರಣಗಳು ಉಳಿದಂತಾಗಿವೆ.
ಕರೊನಾ ಸೋಂಕಿನಿಂದ ಗುಣಮುಖರಾದ ಹಿನ್ನೆಲೆ ಹೊಸಪೇಟೆ ನಗರದ ಮತ್ತೊರ್ವ ವ್ಯಕ್ತಿಯನ್ನು ಇಂದು ಕೋವಿಡ್ ಜಿಲ್ಲಾ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಇದರಿಂದಾಗಿ 11 ಪ್ರಕರಣಗಳು ದೃಢಪಟ್ಟು ಜಿಲ್ಲೆಯ ಜನರ ತೀವ್ರ ಆತಂಕಕ್ಕೆ ಕಾರಣವಾಗಿದ್ದ ಹೊಸಪೇಟೆ ನಗರ ಸದ್ಯ ಕರೊನಾ ಮುಕ್ತವಾದಂತಾಗಿದೆ. ಕರೊನಾದಿಂದ ಗುಣಮುಖರಾದ 39 ವರ್ಷದ ರೋಗಿ ನಂ.331 ವ್ಯಕ್ತಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ ಅವರು ಗುಣಮುಖರಾಗಿ ಮನೆಯತ್ತ ತೆರಳಲು ಸಿದ್ಧರಾಗಿದ್ದ ರೋಗಿ ನಂ.331 ಅವರಿಗೆ ಹೂಗುಚ್ಛ, ಹಣ್ಣು ನೀಡಿ, ಚಪ್ಪಾಳೆ ತಟ್ಟಿ ಅಭಿನಂದಿಸಿದರು. ನಂತರ ಅವರಿಗೆ ಕಂದಾಯ ಇಲಾಖೆ ವತಿಯಿಂದ ಪಡಿತರ ಕಿಟ್ ಕಳುಹಿಸಿಕೊಡಲಾಯಿತು.
ಜಿಲ್ಲೆಯಲ್ಲೇ ಮೊದಲ ಬಾರಿಗೆ ಕರೊನಾ ಕಾಣಿಸಿಕೊಂಡಿದ್ದು ಹೊಸಪೇಟೆಯಲ್ಲಿ. ಈ ನಗರದಲ್ಲಿ 11 ಜನರಿಗೆ ಈ ಸೋಂಕು ಕಾಣಿಸಿಕೊಂಡಿತ್ತು ಅವರೆಲ್ಲಾ ಈಗ ಗುಣಮುಖರಾಗಿದ್ದಾರೆ. ಇವರು ಕೊರೊನಾ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದರು.