ಬೆಂಗಳೂರು: ಕೊರೊನಾ ಕೇಸ್‍ನಲ್ಲಿ ಬೆಂಗಳೂರಿನ ಹೊಗಸಂದ್ರ ನಂಜನಗೂಡು ಆಗುತ್ತಿದಿಯಾ ಅನ್ನೋ ಆತಂಕ ಎದುರಾಗಿದೆ. ಕಾರಣ ಬಿಹಾರ ಮೂಲದ ಕಾರ್ಮಿಕನೊಬ್ಬನಿಂದಲೇ ಈ ಏರಿಯಾದಲ್ಲಿ ಒಂದೇ ದಿನ ಬರೋಬ್ಬರಿ 13 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ.
ಬಿಹಾರ ಮೂಲದ ಕಾರ್ಮಿಕ ಬೊಮ್ಮನಹಳ್ಳಿ ವಲಯಕ್ಕೆ ಬರುವ ಹೊಗಸಂದ್ರದಲ್ಲಿ ವಾಸಿಸುತ್ತಿದ್ದ. ಈತ ನಮ್ಮ ಮೆಟ್ರೋ ಕಾಮಗಾರಿಗೆ ಕೆಲಸ ಮಾಡುತ್ತಿದ್ದು, ಬರೋಬ್ಬರಿ 13 ಮಂದಿಗೆ ಕೊರೊನಾ ಹಬ್ಬಿರುವುದು ಬೆಂಗಳೂರಲ್ಲಿ ಆತಂಕ ಹೆಚ್ಚಿಸಿದೆ. ಈ ಹಿನ್ನೆಲೆಯಲ್ಲಿ ಗುರುವಾರ ಇಡೀ ಏರಿಯಾವನ್ನು ಸೀಲ್‍ಡೌನ್ ಮಾಡಲಾಗಿದೆ
ಈತ ವಾಸಿಸುತ್ತಿದ್ದ ವಿದ್ಯಾಜ್ಯೋತಿ ನಗರದಲ್ಲಿ ರಸ್ತೆ, ಅಂಗಡಿ, ಮನೆಗಳನ್ನು ಬಂದ್ ಮಾಡಲಾಗಿದೆ. ಬಿಹಾರ ಮೂಲದ ಈ ಕಾರ್ಮಿಕ ಹೊಗಸಂದ್ರದಲ್ಲಿ ಉಳಿದ 13 ಮಂದಿಯ ಒಟ್ಟಿಗೆ ವಾಸವಾಗಿದ್ದ. ಅಲ್ಲದೇ ಬಿಬಿಎಂಪಿ ನೀಡಿದ್ದ ಆಹಾರದ ಕಿಟ್‍ನಿಂದ 150 ಮಂದಿ ಒಟ್ಟಿಗೆ ಅಡುಗೆ ರೆಡಿ ಮಾಡುತ್ತಿದ್ದರು.
ಈತನ ಸಂಪರ್ಕದಲ್ಲಿದ್ದ 150 ಮಂದಿಯನ್ನ ಕ್ವಾರಂಟೈನ್ ಮಾಡಲಾಗಿದೆ. ಆದರೆ ಈ ಕಾರ್ಮಿಕನಿಗೆ ಕೊರೊನಾ ಹೇಗೆ ಬಂತು ಅನ್ನೋದೇ ಈಗ ರಹಸ್ಯವಾಗಿಬಿಟ್ಟಿದೆ. ಲಾಕ್‍ಡೌನ್‍ಗೂ ಮೊದಲು ಈತ ಬಿಹಾರಕ್ಕೆ ಹೋಗಿಬಂದಿದ್ದ ಎಂದು ತಿಳಿದುಬಂದಿದೆ. ಈತನಿಂದ ಸೋಂಕಿತರಾದವರು ಪಕ್ಕದ ಮಂಗಮ್ಮನ ಪಾಳ್ಯದಲ್ಲೂ ಕೆಲಸ ಮಾಡುತ್ತಿದ್ದರು. ಹೀಗಾಗಿ ಈ ಸೋಂಕಿತರ ಸಂಪರ್ಕಕ್ಕೆ ಯಾರೆಲ್ಲ ಬಂದಿದ್ದಾರೆ ಅನ್ನೋ ಬಗ್ಗೆಯೂ ಇವತ್ತಿನಿಂದ ಬಿಬಿಎಂಪಿ ಮಾಹಿತಿ ಸಂಗ್ರಹಿಸಲಿದೆ. ಇನ್ನೂ ಈತ ಓಡಾಡುತ್ತಿದ್ದ ಆಟೋ ಚಾಲಕ ಮತ್ತು ಆತನ ಮನೆಯವರಿಗೆ ಕೊರೊನಾ ನೆಗೆಟಿವ್ ಬಂದಿದೆ.