ವಿಜಯಪುರ: ಜಿಲ್ಲೆಯಲ್ಲಿ ಕೊರೊನಾ ತನ್ನ ಅಟ್ಟಹಾಸವನ್ನು ಮುಂದುವರಿಸಿದೆ. ಅದರಲ್ಲೂ ಮಹಾರಾಷ್ಟ್ರದಿಂದ ಬಂದವರಲ್ಲೇ ಸೋಂಕು ಹೆಚ್ಚಾಗಿ ಪತ್ತೆಯಾಗಿದೆ. ಇದರಿಂದ ಜಿಲ್ಲಾಡಳಿತ ಒಂದಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಆದರೂ ಜನ ಜಿಲ್ಲಾಡಳಿತದ ಕಣ್ಣಿನಿಂದ ತಪ್ಪಿಸಿಕೊಂಡು ಕಳ್ಳದಾರಿ ಮೂಲಕ ಎಂಟ್ರಿ ಆಗುತ್ತಿದ್ದಾರೆ.
ಕರ್ನಾಟಕಕ್ಕೆ ಮುಂಬೈನದ್ದೇ ಟೆನ್ಶನ್. ಮಹಾರಾಷ್ಟ್ರದಿಂದ ಬರೋರಿಂದಾಗಿ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 5 ಸಾವಿರ ಗಡಿದಾಟಿದೆ. ಈಗ 7 ದಿನ ಕ್ವಾರಂಟೈನ್‍ಗೆ ಸೂಚಿಸಿದ್ದರಿಂದ ಮುಂಬೈನಿಂದ ಬರುವವರು ಕಳ್ಳಾಟ ಮಾಡುತ್ತಿದ್ದಾರೆ. ಕ್ವಾರಂಟೈನ್ ತಪ್ಪಿಸಿಕೊಳ್ಳಲು ನದಿಯಿಂದ ಎಂಟ್ರಿ ಆಗುತ್ತಿದ್ದಾರೆ.
ವಿಜಯಪುರ ಜಿಲ್ಲೆಯ ಮಹಾರಾಷ್ಟ್ರ-ಕರ್ನಾಟಕ ಗಡಿ ಗ್ರಾಮವಾದ ದೂಳಖೇಡದಲ್ಲಿ ಜಿಲ್ಲಾಡಳಿತ ಚೆಕ್ ಮಾಡಿ ಬಳಿಕ 7 ದಿನ ಸಾಂಸ್ಥಕ ಕ್ವಾರಂಟೈನ್, ನಂತರ 14 ದಿನ ಹೋಂ ಕ್ವಾರಂಟೈನ್ ಆಗಬೇಕಿದೆ. ಇದನ್ನ ತಪ್ಪಿಸಿಕೊಳ್ಳಲು ಮಹಾರಾಷ್ಟ್ರದ ಜನ ಜಿಲ್ಲೆ ಹಾಗೂ ರಾಜ್ಯಕ್ಕೆ ಬರಲು ಕಳ್ಳಮಾರ್ಗ ಹಿಡಿದಿದ್ದಾರೆ. ಮಹಾರಾಷ್ಟ್ರದ ಸೋಲಾಪುರ ಸೇರಿದಂತೆ ಗಡಿಯಲ್ಲಿರುವ ಗ್ರಾಮದ ಜನರು ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಉಮರಜ ಗ್ರಾಮದ ಮೂಲಕ ಜಿಲ್ಲೆಗೆ ಎಂಟ್ರಿ ಕೊಡುತ್ತಿದ್ದಾರೆ.
ಮಹಾರಾಷ್ಟ್ರದ ತೇಲಗಾಂವ ಹಾಗೂ ವಿಜಯಪುರ ಜಿಲ್ಲೆಯ ಉಮರಜ ಮಧ್ಯೆ ಭೀಮಾನದಿ ಇದೆ. ಭೀಮಾನದಿಯಲ್ಲಿ ನೀರಿಲ್ಲದ ಕಾರಣ ನದಿ ದಾಟಿಕೊಂಡು ಜನರು ಅಕ್ರಮವಾಗಿ ಎಂಟ್ರಿ ಕೊಡುತ್ತಿದ್ದಾರೆ. ಬೈಕ್ ಮತ್ತು ನಡೆದುಕೊಂಡು ಜನರು ರಾಜ್ಯಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಹಾಡಹಗಲೇ ಜನರು ಈ ರೀತಿ ಅಕ್ರಮವಾಗಿ ರಾಜ್ಯವನ್ನ ನುಗ್ಗುತ್ತಿದ್ದರೆ ಇದನ್ನ ತಡೆಯುವ ಕೆಲಸ ಮಾತ್ರ ಆಗುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮೊದಲೆ ಮಹಾರಾಷ್ಟ್ರದ ನಂಜು ರಾಜ್ಯದ ನಿದ್ದೆ ಕೆಡೆಸಿದೆ. ಇಂತಹದರಲ್ಲಿ ಈ ರೀತಿ ಅಕ್ರಮವಾಗಿ ಜನರು ರಾಜ್ಯವನ್ನು ನುಗ್ಗುತ್ತಿದ್ದು, ರಾಜ್ಯದ ಜನರ ಆತಂಕಕ್ಕೆ ಕಾರಣವಾಗಿದೆ.