ಬೆಂಗಳೂರು: ಕೇಂದ್ರ ಸರ್ಕಾರ ಘೋಷಿಸಿರುವ 20 ಲಕ್ಷ ಕೋಟಿ ರೂ. ಪ್ಯಾಕೇಜ್ ಕುರಿತು ರಾಜಕೀಯ ವಲಯದಲ್ಲಿ ಪರ ವಿರೋಧದ ಚರ್ಚೆ ನಡೆಯುತ್ತಿದ್ದು, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಟ್ವೀಟ್ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, 20 ಲಕ್ಷ ಕೋಟಿ ರೂ. ಪ್ಯಾಕೇಜ್ ಎಂಬುದು ಲಿಕ್ವಿಡಿಟಿ(ನಗದು) ಆಧಾರಿತವಲ್ಲ. ಇದರಿಂದ ಜನರಿಗೆ ಕನಿಷ್ಠ ಸಹಾಯವೂ ಆಗದು. ಇವು ಕಾಲ್ಪನಿಕ ಘೋಷಣೆಗಳು ಮಾತ್ರ. ಇದರಲ್ಲಿರುವುದು ಉದ್ಯಮ, ಉದ್ಯಮಿಗಳಷ್ಟೇ ಆತ್ಮನಿರ್ಭರ ಭಾರತ್ ನಿಮಗೆ ನೀವೇ ಆಗಬೇಕು. ನಮ್ಮಿಂದ ನಿಮಗೆ ಚಿಕ್ಕಾಸೂ ದೊರಕದು ಎಂದು ಕೇಂದ್ರ ಸರ್ಕಾರ ಜನರಿಗೆ ಸ್ಪಷ್ಟನೆ ನೀಡಿದೆ ಎಂದು ಟೀಕಿಸಿದ್ದಾರೆ.ಕೊರೊನಾ ವೈರಸ್ ನಿಂದ ಸೃಷ್ಟಿಯಾಗಿರುವ ಬಿಕ್ಕಟ್ಟನ್ನು ಎದುರಿಸಲು ರಾಜ್ಯಗಳಿಗೆ ಕೇಂದ್ರ ಸರ್ಕಾರ ಅಗತ್ಯ ನೆರವು ನೀಡಬೇಕಿತ್ತು. ಆದರೆ ತನಿಗಿಷ್ಟ ಬಂದ ಘೋಷಣೆಗಳನ್ನು ಕೂಗಿ 20 ಲಕ್ಷ ಕೋಟಿ ರೂ. ಕೊಟ್ಟೆವೆಂದು ತನ್ನ ಬೆನ್ನು ತಟ್ಟಿಕೊಳ್ಳುತ್ತಿದೆ. ರಾಜ್ಯಗಳನ್ನು ಅಕ್ಷರಶಃ ಭಿಕ್ಷಾಪಾತ್ರೆ ಹಿಡಿದು ನಿಲ್ಲುವಂತೆ ಮಾಡಿದೆ. ಕೇವಲ ಘೋಷಣೆಗಳ ಮೂಲಕ, ಕಾಲ್ಪನಿಕ ಲೆಕ್ಕಾಚಾರಗಳ ಮೂಲಕ 20 ಲಕ್ಷ ಕೋಟಿ ರೂ. ಪ್ಯಾಕೇಜ್ ಎಂಬ ಅರಗಿನ ಅರಮನೆ ಕಟ್ಟಿರುವ ಕೇಂದ್ರ ಸರ್ಕಾರ, ಜನರ ದುಸ್ಥಿತಿಯನ್ನು ಗೇಲಿ ಮಾಡಿದೆ. ಈ ಘೋಷಣೆಯ ಮೂಲಕ ಅಪಾರ ಪ್ರಮಾಣದ ಪ್ರಚಾರ ಪಡೆದಿರುವ ಬಿಜೆಪಿ, ದೇಶದ ಬಿಕ್ಕಟ್ಟನ್ನು ರಾಜಕೀಯದ ಅವಕಾಶವಾಗಿ ಪರಿವರ್ತಿಸಿಕೊಂಡಿದೆ ಎಂದು ಆರೋಪಿಸಿದ್ದಾರೆ.
ಲಾಕ್‍ಡೌನ್‍ನಿಂದ ತತ್ತರಿಸಿರುವ ಜನರನ್ನು, ರೈತರನ್ನು, ಬಡವರನ್ನು ಪಕ್ಕಕ್ಕಿಟ್ಟು, ಉದ್ಯಮಿಗಳು, ಉದ್ಯಮಗಳ ವ್ಯವಹಾರಕ್ಕೆ ಈ 20 ಲಕ್ಷ ಕೋಟಿ ರೂ. ಪ್ಯಾಕೇಜ್ ರೂಪಿಸಿರುವುದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ವಿವರಣೆಯಲ್ಲಿ ಸ್ಪಷ್ಟವಾಗಿದೆ. ಪ್ಯಾಕೇಜ್‍ನಲ್ಲಿ ತಮಗೂ ಒಂದಿಷ್ಟು ಸಿಗಬಹುದು ಎಂದು ನಿರೀಕ್ಷಿಸಿದ್ದ ಜನರ ನಿರೀಕ್ಷೆಗಳಿಗೆ ತಣ್ಣೀರೆರಚಲಾಗಿದೆ. ಈ ಬಿಕ್ಕಟ್ಟನ್ನು ಭಾರತ ಅವಕಾಶವಾಗಿ ಪರಿವರ್ತಿಸಿಕೊಂಡಿದೆ ಎಂದೂ, ದೇಶ ಆತ್ಮನಿರ್ಭರ ಭಾರತ ಆಗಬೇಕು ಎಂದು ಮೋದಿ ನಿನ್ನೆಯ ಭಾಷಣದಲ್ಲಿ ಹೇಳಿದ್ದರು. ಅದರಂತೆಯೇ ಬಿಕ್ಕಟ್ಟನ್ನು ಬಿಜೆಪಿ ರಾಜಕೀಯದ ಅವಕಾಶವಾಗಿಸಿಕೊಂಡಿದೆ. ಆತ್ಮನಿರ್ಭರ ಭಾರತ ಎಂಬ ಆಕರ್ಷಕ ಪದ ಗುಚ್ಛದ ಮೂಲಕ ದೇಶದ ಜನ ಸ್ವಾವಲಂಬಿಗಳಾಗಬೇಕು ಎಂದು ಹೇಳಿ ಅನಾಥರನ್ನಾಗಿಸಲಾಗಿದೆ ಎಂದು ಹರಿಹಾಯ್ದಿದ್ದಾರೆ.