ಬೆಂಗಳೂರು: ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹಿಂ ಬೆನ್ನಲ್ಲೇ ಶಾಸಕ ಎನ್.ಎ.ಹ್ಯಾರಿಸ್ ರಂಜಾನ್ ನಿಮಿತ್ತ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಕೋರಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.
ಸಿಎಂ ಇಬ್ರಾಹಿಂ ಅವರ ಪತ್ರಕ್ಕೆ ಕಾಂಗ್ರೆಸ್‍ನ ಮುಸ್ಲಿಂ ಮುಖಂಡರೇ ವಿರೋಧ ವ್ಯಕ್ತಪಡಿಸಿದ್ದರು ಎಂಬ ಮಾತುಗಳು ಕೇಳಿ ಬಂದಿದ್ದವು. ಹೀಗಿದ್ದರೂ ಶಾಸಕ ಹ್ಯಾರಿಸ್ ಅವರು ಸಾಮೂಹಿಕ ಪ್ರಾರ್ಥನೆಗೆ ಪತ್ರ ಬರೆದಿರುವುದು ಚರ್ಚೆಗೆ ಕಾರಣವಾಗಿದೆ.
ಪತ್ರದಲ್ಲಿ ಏನಿದೆ?:
ಮುಸ್ಲಿಂ ಬಾಂಧವರು ಚಂದ್ರ ದರ್ಶನ ನಂತರ ಮೇ 24 ಅಥವಾ 25ರಂದು ಈದುರ್ ಫಿತರ್/ ರಂಜಾನ್ ಹಬ್ಬವನ್ನು ಆಚರಿಸುತ್ತಿದ್ದಾರೆ. ರಂಜಾನ್ ಹಬ್ಬದ ದಿನದಂದು ಮುಸ್ಲಿಂ ಬಾಂಧವರು ವಿಶೇಷ ಪ್ರಾರ್ಥನೆ ಮಾಡುತ್ತಾರೆ. ಹೀಗಾಗಿ ಈದ್ಗಾ ಮೈದಾನಗಳಲ್ಲಿ ಅಥವಾ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಮಾಡಿಕೊಡಬೇಕು. ಇದರಿಂದ ಸಾರ್ವಜನಿಕರಿಗೆ ತೊಂದರೆಯಾದರೆ ನಮ್ಮ ಮುಸ್ಲಿಂ ಸಮುದಾಯವನ್ನು ನಿಂದಿಸುವುದು ಸೂಕ್ತವಲ್ಲ. ತಜ್ಞರು ಮತ್ತು ವೈದ್ಯರ ಸಲಹೆಯನ್ನು ಪಡೆದು ಪರಿಸ್ಥಿತಿ ಅನುಕೂಲಕರವಾಗಿದ್ದರೆ ಮಾತ್ರ ರಂಜಾನ್ ದಿನದಂದು ಸಾಮೂಹಿಕ ಪ್ರಾರ್ಥನೆಗೆ ಅವಕಾಶ ನೀಡುವ ಬಗ್ಗೆ ನಿರ್ಧರಿಸಬಹುದಾಗಿದೆ.
ಸರ್ಕಾರದ ಆದೇಶದಂತೆ ಮುಸ್ಲಿಂ ಬಾಂಧವರು ಪವಿತ್ರ ರಂಜಾನ್ ಮಾಸದಲ್ಲಿ ಪ್ರತಿ ದಿನ ಕಡ್ಡಾಯ ನಮಾಜ್ ಅನ್ನು ಮಸೀದಿಯ ಬದಲು ಮನೆಯಲ್ಲೇ ಮಾಡುತ್ತಿದ್ದಾರೆ. ಅಲ್ಲದೆ ರಾಜ್ಯದ ಮುಸ್ಲಿಮರು ಸರ್ಕಾರದ ಈ ನಿರ್ಧಾರಕ್ಕೆ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ.