ಬೆಂಗಳೂರು: ಮಾಜಿ ಡಾನ್ ಮುತ್ತಪ್ಪ ರೈ ಅಂತ್ಯಕ್ರಿಯೆಯಲ್ಲಿ ಅವರ ಬೆಂಬಲಿಗರು ಗಾಳಿಯಲ್ಲಿ ಗುಂಡು ಹಾರಿಸಿ ಗೌರವ ಸೂಚಿಸಿದ್ದಾರೆ.
ಜಯಕರ್ನಾಟಕ ಸಂಘಟನೆ ಸಂಸ್ಥಾಪಕ ಮುತ್ತಪ್ಪ ರೈ(68) ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಈ ಹಿನ್ನೆಲೆ ಅನೇಕ ದಿನಗಳಿಂದ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಸುಮಾರು 2:10ಕ್ಕೆ ಮೃತಪಟ್ಟಿದ್ದು, ಅಂತ್ಯಕ್ರಿಯೆ ರಾಮನಗರ ಜಿಲ್ಲೆಯ ಬಿಡದಿಯ ತೋಟದ ಮನೆಯಲ್ಲಿ ನೆರವೇರಿತು.
ಕಿರಿಯ ಮಗ ರಿಕಿ ರೈ ತಂದೆ ಮುತ್ತಪ್ಪ ರೈ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಈ ವೇಳೆ ಮುತ್ತಪ್ಪ ರೈ ಬೆಂಬಲಿಗರು ಕುಶಾಲತೋಪಿನ ರೀತಿಯಲ್ಲಿ ಐದು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿ ಗೌರವ ಸಲ್ಲಿಸಿದ್ದ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಕರ್ನಾಟಕ ರಾಜ್ಯ ಅಥ್ಲೆಟಿಕ್ ಅಸೋಸಿಯೇಷನ್‍ನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದ ಮುತ್ತಪ್ಪ ರೈ ಕೆಲವು ತಿಂಗಳಿನಿಂದ ಉತ್ತಮ ಆಡಳಿತ ನಡೆಸುತ್ತಿದ್ದರು. ಅದರಲ್ಲೂ ಗ್ರಾಮೀಣ ಭಾಗದ ಕ್ರೀಡಾಪಟುಗಳ ನೆರವಿಗೆ ನಿಲ್ಲುವುದರ ಮೂಲಕ ಉತ್ತಮ ಸ್ಪರ್ಧೆಗಳನ್ನು ಆಯೋಜಿಸುತ್ತಿದ್ದರು. ಅನಾರೋಗ್ಯದ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಸಂಪೂರ್ಣ ವಿಶ್ರಾಂತಿಯಲ್ಲಿದ್ದರು.
ವೈದ್ಯರು ವಿಶ್ರಾಂತಿ ಸೂಚಿಸಿದ್ದರಿಂದ ತಮ್ಮ ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕ ಹಾಗೂ ರಾಜ್ಯಾಧ್ಯಕ್ಷ ಸ್ಥಾನ ತೊರೆದಿದ್ದರು. ಕೆಎಸ್‍ಎಎ ಜೊತೆಗೆ ಜಯಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.