ಬೆಂಗಳೂರು: ರಾಜ್ಯದಲ್ಲಿ ಒಂದು ಕಡೆ ಕೊರೊನಾ ಅಟ್ಟಹಾಸ, ಮತ್ತೊಂದು ಕಡೆ ನೀರಿಗೆ ಹಾಹಾಕಾರ ಉಂಟಾಗಿದೆ. ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಕಾಸಿನಕಲ್ಲು ಗ್ರಾಮದಲ್ಲಿ ಮೂಲಭೂತ ಸೌಕರ್ಯದ ಕೊರತೆ ಉಂಟಾಗಿದೆ.
ಗ್ರಾಮಕ್ಕೆ ತೆರಳಲು ರಸ್ತೆ ಇಲ್ಲ, ಕುಡಿಯಲು ನೀರಿಲ್ಲದೆ ಗ್ರಾಮಸ್ಥರು ಪರದಾಟ ನಡೆಸುತ್ತಿದ್ದಾರೆ. ಅಲ್ಲದೇ ಮಳೆಯ ನೀರಿನ ಆಶ್ರಯದಲ್ಲೇ ದಿನದ ಬದುಕು ಸಾಗಿಸುತ್ತಿದ್ದಾರೆ. ಸಣ್ಣ ಕೆರೆಯ ನೀರನ್ನು ನಂಬಿ ಜೀವನ ನಡೆಸುತ್ತಿರುವ ಗ್ರಾಮದ ಜನರು ದಿನನಿತ್ಯದ ಬಳಕೆಗೆ ಕೊಳಕು ನೀರು ಆಧಾರವಾಗಿದೆ ಎಂದು ದೂರಿದ್ದಾರೆ.
ದುಡ್ಡು ಕೊಟ್ಟು ಕುಡಿಯುವ ನೀರನ್ನು ಕೊಳ್ಳಬೇಕು. 500 ರಿಂದ 700 ರೂ. ಕೊಟ್ಟು ನೀರು ಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಕಲ್ಲು ಬಂಡೆಗಳ ನಡುವೆ ನಡೆದು ನೀರು ತರುವ ಸ್ಥಿತಿ ನಮ್ಮ ಗ್ರಾಮಕ್ಕೆ ಬಂದಿದೆ. ಈಗಲಾದರೂ ನಮ್ಮ ಸಮಸ್ಯೆ ಬಗೆಹರಿಸಿ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಅಲ್ಲದೇ ನೆಲಮಂಗಲ ಶಾಸಕ ಶ್ರೀನಿವಾಸ ಮೂರ್ತಿ ಹಾಗೂ ತಾಲೂಕು ಅಧಿಕಾರಿಗಳು ಸಹ ಗಮನಹರಿಸಬೇಕಿದೆ ಎಂದಿದ್ದಾರೆ.