ಬೆಂಗಳೂರು : ಶಾಸಕ ಬಸವರಾಜ್ ಯತ್ನಾಳ್ ಪಕ್ಷದ ವಿರುದ್ಧ ಕೆಲಸ ಮಾಡುತ್ತಿದ್ದೀಯಾ. ಮೊದಲು ನೀನು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡು ಅಂತಾ ಸಚಿವ ಮುರಗೇಶ್ ನಿರಾಣಿ ಕಿಡಿ ಕಾರಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿನ್ನೇ ನಡೆದ ಸಮಾವೇಶದಲ್ಲಿ ಬಹಿರಂಗವಾಗಿ ಯತ್ನಾಳ್ ಅವರು , ಸಚಿವರು ರಾಜೀನಾಮೆ ನೀಡಬೇಕು ಎಂದು ಹೇಳುತ್ತಾರೆ. ನಮಗೆ ರಾಜೀನಾಮೆ ನೀಡು ಎನ್ನುವುದಕ್ಕೆ ಇವರು ಯಾರು ಎಂದು ಪ್ರಶ್ನ ಮಾಡಿದ್ದಾರೆ. ಮೊದಲು ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಗೆದ್ದು ಬರಲಿ ಎಂದು ಸವಾಲ್ ಹಾಕಿದ್ದಾರೆ.
ಯತ್ನಾಳ್ ಅವರು ಕಾಂಗ್ರಸ್ ಪಕ್ಷ ಬಿ-ಟೀಮ್ ಮೆಂಬರ್ ಆಗಿ ಕೆಲಸ ಮಾಡುತ್ತಿದ್ದಾರೆ. ಪಕ್ಷದ ವಿರುದ್ಧವಾಗಿ ಕಾರ್ಯ ಮಾಡುತ್ತಿದ್ದಾರೆ. ಸಮಾಜಕ್ಕೆ ಯತ್ನಾಳ್ ಹಾಗೂ ಕಾಶಪ್ಪನವರು ಕೊಡುಗೆ ಏನು ಎಂಬುವುದು ಸ್ಪಷ್ಟ ಪಡಿಸಲಿ ಎಂದಿದ್ದಾರೆ. ಸ್ವಾಮೀಜಿಗಳು ರಾಜಕೀಯ ಮೀಸಲಾತಿಗೆ ಹೋರಾಟ ನಡೆಸುತ್ತಿಲ್ಲ. ಸಮುದಾಯದ ಬಡವರಿಗಾಗಿ ಮೀಸಲಾತಿ ಕೇಳುತ್ತಿದ್ದಾರೆ ಎಂದು ಹೇಳಿದರು.
ಸಮಾವೇಶದನ ಕೆಲವು ಘಟನೆಗಳನ್ನು ಸಮುದಾಯದ ಎಲ್ಲ ಬಿಜೆಪಿ ಶಾಸಕರು ಖಂಡಿಸುತ್ತಿವೇ. ನಿನ್ನೆ ನಡೆದಿರುವುದು ಕಾಶಪ್ಪನವರ ಸಮಾವೇಶವಾಗಿತ್ತು. ಸ್ವಾಮೀಜಿಗಳು ಸಹ ಬರೀ ಯತ್ನಾಳ್ ಹಾಗೂ ಕಾಶಪ್ಪನವರ ಅಭಿಪ್ರಾಯದ ಮೇಲೆ ಮುನ್ನಡೆಯಬಾರದು. ಯತ್ನಾಳ್ ಅವರು ಪ್ರಚೋದನಾಕಾರಿ ಹೇಳಿಕೆ ನೀಡುವ ಮೂಲಕ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸಿಎಂ ಬಿಎಸ್ ವೈ ಅವರು ಸಹ ಪಂಚಮಸಾಲಿ ಲಿಂಗಾಯತರಿಗೆ 2 ಎ ಮೀಸಲಾತಿಗೆ ಪ್ರಯತ್ನಿಸುತ್ತಿದ್ದಾರೆ. ಬಸವ ಜಯಮೃತ್ಯುಂಜಯ ಸ್ವಾಮೀಗಳು ಸಿಎಂರೊಂದಿಗೆ ಮಾತುಕತೆಗೆ ಬರಬೇಕು. ತಾವು ಸ್ವಂತ ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.