ಬೆಳಗಾವಿ: ಚಿಕ್ಕೋಡಿ ಹೆರಿಗೆ ಆಸ್ಪತ್ರೆಯ ಸಿಬ್ಬಂದಿಯಿಂದ ಆದ ಮಹಾ ಎಡವಟ್ಟಿಗೆ ಇಡೀ ಗ್ರಾಮವೊಂದು ಆತಂಕಕ್ಕೆ ಒಳಗಾಗಿದೆ. ಬಾಣಂತಿಗೆ ಸೋಂಕು ಇರುವುದನ್ನು ಹೇಳದೇ ಆಸ್ಪತ್ರೆ ಸಿಬ್ಬಂದಿ ಡಿಸ್ಚಾರ್ಜ್ ಮಾಡಿದ್ದಾರೆ. ಇದರಿಂದ ಈಗ ಇಡೀ ಬಾವನಸೌಂದತ್ತಿ ಗ್ರಾಮಕ್ಕೆ ಗಂಡಾಂತರ ಎದುರಾಗಿದೆ.
ಕಳೆದ ಮೂರು ದಿನಗಳ ಹಿಂದೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಹೆರಿಗೆ ಆಸ್ಪತ್ರೆಯಲ್ಲಿ ಮಹಿಳೆಗೆ ಹೆರಿಗೆಯಾಗಿತ್ತು. ಹೆರಿಗೆಯಾದ ಬಳಿಕ ಬಾಣಂತಿಗೆ ಸೋಂಕಿರುವುದು ಹೇಳದೆ ವೈದ್ಯರು ಆಕೆಯನ್ನು ಮನೆಗೆ ಕಳುಹಿಸಿದ್ದರು. ನಿನ್ನೆ ಸಂಜೆ ಗ್ರಾಮವನ್ನ ಸೀಲ್ಡೌನ್ ಮಾಡಲು ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.
ಚಿಕ್ಕೋಡಿ ಹೆರಿಗೆ ಆಸ್ಪತ್ರೆ ಸಿಬ್ಬಂದಿಗಳ ವಿರುದ್ಧ ಗ್ರಾಮಸ್ಥರು, ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೈದ್ಯರ ಬೇಜವಾಬ್ದಾರಿಯಿಂದ ರಾಯಬಾಗ ತಾಲೂಕು ಬಾವನಸೌಂದತ್ತಿ ಗ್ರಾಮದ ಜನರಿಗೆ ಆತಂಕ ಉಂಟಾಗಿದೆ.
ಕೊರೊನಾ ರೋಗ ಲಕ್ಷಣಗಳು ಇಲ್ಲ ಅಂತಾ ಬಾಣಂತಿಯನ್ನ ಮನೆಗೆ ಕಳುಹಿಸಿದ್ದಾರೆ. ನಾವು ಬಾಣಂತಿಯನ್ನ ಊರಿಗೆ ಕರೆದುಕೊಂಡು ಬರುವ ಮುನ್ನ ವೈದ್ಯರು ವಿಷಯ ತಿಳಿಸಿದ್ದರೆ ಬಾಣಂತಿಗೆ ಬೇರೆ ಕಡೆ ವ್ಯವಸ್ಥೆ ಮಾಡುತ್ತಿದ್ದೆವು. ಈಗ ಬಾಣಂತಿ ನೋಡಲು ಮನೆಗೆ ಭೇಟಿ ನೀಡಿದ ಸಂಬಂಧಿಕರಿಗೂ ಸೋಂಕು ತಗುಲುವ ಆತಂಕವಿದೆ ಎಂದು ಕುಟುಂಬಸ್ಥರು ಕಿಡಿಕಾರಿದ್ದಾರೆ.