Breaking News

ಬೆಳಗಾವಿ: ಗಡಿಯಲ್ಲಿ ಭೋರ್ಗರೆದ ಕನ್ನಡ ಪ್ರೇಮ

Spread the love

ಬೆಳಗಾವಿ: ಉದ್ದಾನುದ್ದದ ಕನ್ನಡ ಬಾವುಟ. ಕನ್ನಡದ ಹಿರಿಮೆಯನ್ನು ಎತ್ತಿಹಿಡಿದ ಯುವಜನರ ಕೈಗಳು, ಕನ್ನಡಕ್ಕಾಗಿ ಕೈ ಎತ್ತಿ ಕಲ್ಪವೃಕ್ಷವಾದಂತೆ ಭಾಸವಾಗುತ್ತಿತ್ತು. ಜಾನಪದ ಕಲಾವಿದರ ಹೆಜ್ಜೆಗಳೂ ಕನ್ನಡದ ಹಿರಿಮೆಯನ್ನೇ ಮಾತನಾಡುತ್ತಿದ್ದವು.

ಎತ್ತ ನೋಡಿದರತ್ತ, ಬೆಳಗಾವಿಯ ನಗರದಲ್ಲಿ ಕನ್ನಡದ ಡಿಂಡಿಮ ಮೊಳಗಿತು.

ಮೂರು ವರ್ಷಗಳ ನಂತರ ಮಂಗಳವಾರ ಜರುಗಿದ ಕರ್ನಾಟಕ ರಾಜ್ಯೋತ್ಸವದಲ್ಲಿ ಹರ್ಷೋದ್ಗಾರಗಳು ಮುಗಿಲು ಮುಟ್ಟಿದ್ದರೆ, ಹೆಜ್ಜೆಗಳು ಭುವಿಯನ್ನು ನಡುಗಿಸುತ್ತಿದ್ದವು. ಅನ್ಯ ಭಾಷಿಗರು ಸೊಲ್ಲೆತ್ತದಂತೆ ಕನ್ನಡದ ಧ್ವನಿ ನೆಲ-ಬಾನು ಒಂದು ಮಾಡಿದವು. ನಾಡು, ನುಡಿಯ ಅಭಿಮಾನದ ನಡಿಗೆಯಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸಿದ್ದರು.

ಬೆಂಗಳೂರಿನ ‘ಕನ್ನಡ ಮನಸ್ಸುಗಳು’ ತಂಡದವರು ಗಿನ್ನಿಸ್‌ ದಾಖಲೆಗಾಗಿ ಸಿದ್ಧಪಡಿಸಿದ 3.ಕಿ.ಮೀ ಬಾವುಟವನ್ನು ಬೆಳಗಾವಿಯ ಯುವಜನರು ಮೆರವಣಿಗೆಯುದ್ದಕ್ಕೂ ಹೊತ್ತುಸಾಗಿದರು.

ನಾಡಿನ ಹಲವು ಕಲಾತಂಡಗಳು, ಭುವನೇಶ್ವರಿಯ ವಿವಿಧ ರೂಪಕಗಳು, ಏಕೀಕರಣದ ರೂವಾರಿಗಳು, ನಾಡಿನ ಐತಿಹಾಸಿಕ ಪುರುಷರ ವೇಷ ಧರಿಸಿದ ಮಕ್ಕಳು- ವಯಸ್ಕರು- ಹಿರಿಯರು ಕೂಡ ಕನ್ನಡದವ್ವನ ತೇರು ಎಳೆದರು. ಕಣ್ಣುಹಾಯಿಸಿದೆಡೆಯೆಲ್ಲ, ಕನ್ನಡ ಬಾವುಟಗಳು, ನಟ ಪುನಿತ್‌ ರಾಜ್‌ಕುಮಾರ್‌ ಅವರ ಫೋಟೊ, ಕಟೌಟುಗಳು ರಾರಾಜಿಸಿದವು.

ಹುಕ್ಕೇರಿ ಹಿರೇಮಠದಿಂದ ಭುವನೇಶ್ವರಿಗೆ ಲಕ್ಷಕ್ಕೂ ಹೆಚ್ಚು ಹೋಳಿಗೆ, ಅನ್ನ-ಸಾರು, ಪಲ್ಯ ನೈವೇದ್ಯ ಅರ್ಪಿಸಲಾಯಿತು. 24 ಗಂಟೆಗಳಲ್ಲಿ ನೂರಾರು ಅನ್ನಪೂರ್ಣೆಯರು ಸೇರಿ ಲಕ್ಷಕ್ಕೂ ಅಧಿಕ ಹೋಳಿಗೆ ಸಿದ್ಧಪಡಿಸಿದ್ದರು. ನಿರೀಕ್ಷೆಗೂ ಮೀರಿ ಜನ ಸೇರಿದ್ದರಿಂದ ಮಂಗಳವಾರ ಬೆಳಿಗ್ಗೆ 10ರ ಸುಮಾರಿಗೆ ಆರಂಭವಾದ ಹಬ್ಬದೂಟ ರಾತ್ರಿಯೂ ಮುಂದುವರಿಯಿತು.

ಸೋಮವಾರ ರಾತ್ರಿ 12ಕ್ಕೇ ಕನ್ನಡ ಸಂಘಟನೆಗಳು ಸೇರಿಕೊಂಡು ರಾಜ್ಯೋತ್ಸವಕ್ಕೆ ಚಾಲನೆ ನೀಡಿದವು. ಬಂದೋಬಸ್ತ್‌ಗಾಗಿಯೇ 3,500 ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.


Spread the love

About Laxminews 24x7

Check Also

ಬೈಕ್ – ಹಾಲಿನ ವಾಹನ ನಡುವೆ ಡಿಕ್ಕಿ; ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಸಾವು

Spread the loveಶಿವಮೊಗ್ಗ: ಹಾಲಿನ ವಾಹನ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಶಿವಮೊಗ್ಗದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ